ಚಿತ್ರದುರ್ಗ: ವ್ಯಕ್ತಿಯೊಬ್ಬರ ಮೇಲೆ ಆ್ಯಸಿಡ್ ದಾಳಿ (Acid attack) ನಡೆದಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹಿರಿಯೂರು ಪಟ್ಟಣದ ಹತ್ತಿರ ಈ ಘಟನೆ ನಡೆದಿದೆ. ಹೊಳಲ್ಕೆಯ ಅರುಣ್ ಕುಮಾರ್(29) ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ. ಊಟಕ್ಕೆ ಡಾಬಾ ಹತ್ತಿರ ನಿಂತಿದ್ದ ಸಂದರ್ಭದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಪರಿಣಾಮ ಅರುಣ್ ಕೈ ಮತ್ತು ಮುಖಕ್ಕೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಖಾಸಗಿ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಅರುಣ್, ಬಸ್ ನಲ್ಲಿ ಚಿತ್ರದುರ್ಗದಿಂದ ಬೆಂಗಳೂರು ತೆರಳುತ್ತಿದ್ದರು. ಹಿರಿಯೂರು ಬಳಿ ಖಾಸಗಿ ಡಾಬಾ ಬಳಿ ಬಸ್ ನಿಂತಾಗ ವಾಶ್ ರೂಮ್ ಗೆ ಹೋಗಿ ಬಸ್ ಏರಲು ಬರುತ್ತಿದ್ದಂತೆ ದಾಳಿ ನಡೆಸಿ, ಪರಾರಿಯಾಗಿದ್ದಾರೆ. ಪ್ರೇಮ ವಿಚಾರವೇ ಈ ಕೃತ್ಯಕ್ಕೆ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅರುಣ್ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಆದರೆ, ಇದಕ್ಕೆ ಯುವತಿ ಕುಟುಂಬಸ್ಥರ ವಿರೋಧವಿತ್ತು ಎನ್ನಲಾಗಿದೆ. ಈ ಕುರಿತು ಕರೆ ಮಾಡಿ ಕೂಡ ಆತನಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.