ಮಲಯಾಳಂನ ಹಿರಿತೆರೆ ಹಾಗೂ ಕಿರುತೆರೆಗಳಲ್ಲಿ ಹಾಸ್ಯ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಕೊಲ್ಲಂ ಸುಧಿ (Kollam Sudhi)(39) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ತ್ರಿಶೂರ್ ಹತ್ತಿರ ಬೆಳಿಗ್ಗೆ 4.30ರ ಸುಮಾರು ಈ ದುರ್ಘಟನೆ ನಡೆದಿದೆ. ನಟ ಕೊಲ್ಲಂ ಸುಧಿ, ವಡಕರಾದಲ್ಲಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ಸಂದರ್ಭದಲ್ಲಿ ಅವರಿದ್ದ ಕಾರು, ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಕೊಲ್ಲಂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಾರು ಹಾಗೂ ಟ್ರಕ್ ನಡುವೆ ಭೀಕಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಗಾಯಗೊಂಡಿದ್ದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಧಿ ಅವರು ನಿಧನರಾಗಿದ್ದು, ಇನ್ನುಳಿದ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲ್ಲಂ ಸುಧಿ ಅವರ ಅಕಾಲಿಕ ಮರಣಕ್ಕೆ ಇಡೀ ಚಿತ್ರ ರಂಗವೇ ಕಣ್ಣೀರು ಸುರಿಸುತ್ತಿದೆ. ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. 2015ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟಟ್ದ್ದ ಸುಧಿ, ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಹಾಸ್ಯ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದರು. ‘ಕಟ್ಟಪ್ಪನೆಯಿಲೆ ಹೃತಿಕ್ ರೋಷನ್’, ‘ಆ್ಯನ್ ಇಂಟರ್ನ್ಯಾಷನಲ್ ಲೋಕಲ್ ಸ್ಟೋರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.