ಅದಾನಿ ಗ್ರೂಪ್ ವಿರುದ್ಧ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಮತ್ತೊಂದು ಗಂಭೀರ ಆರೋಪ ಹೊರಿಸಿದೆ. ಸುಮಾರು ಮೂರು ವರ್ಷಗಳ ಹಿಂದೆ ಎನ್‌ಡಿಟಿವಿ (NDTV) ಷೇರುಗಳನ್ನು ಖರೀದಿಸಲು ಅದಾನಿ ಗ್ರೂಪ್ ನೀಡಿದ್ದ ಓಪನ್ ಆಫರ್‌ಗೆ ಸಂಬಂಧಿಸಿದಂತೆ ರಹಸ್ಯ ಮಾಹಿತಿಯ ಸೋರಿಕೆ ನಡೆದಿದೆ ಎಂಬುದು ಸೆಬಿಯ ಪ್ರಮುಖ ಆರೋಪವಾಗಿದೆ.
ಸೆಬಿ ನಡೆಸಿದ ತನಿಖೆಯ ಪ್ರಕಾರ, ಎನ್‌ಡಿಟಿವಿ ಷೇರುಗಳ ಓಪನ್ ಆಫರ್ ಘೋಷಣೆಗೆ ಮುನ್ನವೇ, ಅದರ ಬೆಲೆ, ಷೇರು ಖರೀದಿ ಸಂಬಂಧಿತ ಮಹತ್ವದ ಮಾಹಿತಿಯನ್ನು ಕೆಲವರಿಗೆ ಮುಂಚಿತವಾಗಿ ಹಂಚಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಗೌತಮ್ ಅದಾನಿ ಅವರ ಪುತ್ರ ಪ್ರಣವ್ ಅದಾನಿ, ತಮ್ಮ ಮಾವ ಧನಪಾಲ್ ಶಾ ಹಾಗೂ ಬಾವಂದಿರಾದ ಕುನಾಲ್ ಶಾ ಮತ್ತು ನೃಪಾಲ್ ಶಾ ಅವರಿಗೆ ಈ ಸಂವೇದನಶೀಲ ಮಾಹಿತಿಯನ್ನು ನೀಡಿದ್ದಾರೆ ಎಂಬ ಆರೋಪವನ್ನು ಸೆಬಿ ಮಾಡಿದೆ.
ಈ ರಹಸ್ಯ ಮಾಹಿತಿ ಆಧರಿಸಿ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆದಿದ್ದರೆ, ಅದು ಇನ್ಸೈಡರ್ ಟ್ರೇಡಿಂಗ್ ನಿಯಮಗಳ ಉಲ್ಲಂಘನೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಸೆಬಿ ಈ ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಪರಿಶೀಲಿಸುತ್ತಿದ್ದು, ಸಂಬಂಧಿಸಿದ ವ್ಯಕ್ತಿಗಳ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ.
ಅದಾನಿ ಗ್ರೂಪ್ ವಿರುದ್ಧ ಈ ಹಿಂದೆ ಕೂಡ ಹಲವು ಹಣಕಾಸು ಮತ್ತು ಕಾರ್ಪೊರೇಟ್ ಆಡಳಿತ ಸಂಬಂಧಿತ ಆರೋಪಗಳು ಕೇಳಿಬಂದಿದ್ದವು. ಇದೀಗ ಸೆಬಿಯ ಈ ಹೊಸ ಆರೋಪವು ಮಾರುಕಟ್ಟೆ ವಲಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಹೂಡಿಕೆದಾರರು ಮತ್ತು ಆರ್ಥಿಕ ತಜ್ಞರು ನಿಗಾ ಇಟ್ಟಿದ್ದಾರೆ.








