ದುಶ್ಮಂತ ಚಮೀರ(4/63) ಹಾಗೂ ವನಿಂದು ಹಸರಂಗ(3/7) ಅವರ ಆಕ್ರಮಣಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಆಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಶ್ರೀಲಂಕಾದ ಹಂಬಂಟೋಟದ ಮಹಿಂದ ರಾಜಪಕ್ಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಲಂಕಾ ಬೌಲಿಂಗ್ ದಾಳಿ ಎದುರಿಸುವಲ್ಲಿ ಎಡವಿದ ಆಫ್ಘಾನಿಸ್ತಾನ 22.2 ಓವರ್ಗಳಲ್ಲಿ ಕೇವಲ 116 ರನ್ಗಳಿಗೆ ಆಲೌಟ್ ಆಯಿತು. ಈ ಸುಲಭದ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ 16 ಓವರ್ಗಳಲ್ಲಿ 1 ವಿಕೆಟ್ಗೆ 120 ರನ್ಗಳಿಸಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರಿಂದ ತನ್ನದಾಗಿಸಿಕೊಂಡಿತು.
ಲಂಕಾ ಬೌಲರ್ಗಳ ಪ್ರಾಬಲ್ಯ:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಫ್ಘಾನಿಸ್ತಾನ ಲಂಕಾ ಬೌಲಿಂಗ್ ದಾಳಿಗೆ ತತ್ತರಿಸಿತು. ಇನ್ನಿಂಗ್ಸ್ ಆರಂಭದಿಂದಲೇ ವಿಕೆಟ್ಗಳನ್ನ ಕಳೆದುಕೊಳ್ಳುತ್ತಾ ಸಾಗಿದ ಆಫ್ಘಾನಿಸ್ತಾನದ ಪರ ಇಬ್ರಾಹಿಂ ಜದ್ರಾನ್(22), ಮೊಹಮ್ಮದ್ ನಬಿ(23) ಹಾಗೂ ಗುಲ್ಬದಿನ್(20) ಮಾತ್ರ ಅಲ್ಪಮೊತ್ತದ ರನ್ಗಳಿಸಿದರು. ಉಳಿದಂತೆ ಯಾವುದೇ ಆಟಗಾರರು ಸಹ ತಂಡಕ್ಕೆ ಆಸರೆಯಾಗಲಿಲ್ಲ. ಲಂಕಾ ಪರ ಚಮೀರ(4/63), ಹಸರಂಗ(3/7) ಅದ್ಭುತ ಬೌಲಿಂಗ್ ದಾಳಿ ನಡೆಸಿದರೆ. ಇವರಿಗೆ ಉತ್ತಮ ಸಾಥ್ ನೀಡಿದ ಲಹಿರು ಕುಮಾರ 2 ಹಾಗೂ ತೀಕ್ಷಣ 1 ವಿಕೆಟ್ ಪಡೆದರು.
ನಿಸ್ಸಂಕಾ-ಕರುಣಾರತ್ನೆ ಆಸರೆ:
ಪ್ರವಾಸಿ ತಂಡ ನೀಡಿದ ಸಾಧಾರಣ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾಗಿ ಕಣಕ್ಕಿಳಿದ ಪತುಮ್ ನಿಸ್ಸಂಕಾ(51) ಹಾಗೂ ದಿಮುತ್ ಕರುಣಾರತ್ನೆ(56*) ಆಕರ್ಷಕ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದುಶ್ಮಂತ ಚಮೀರ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.