ಅಫ್ಘಾನಿಸ್ತಾನ್ ಭೂಕಂಪ – ಕನಿಷ್ಠ 1000 ಸಾವು; 1500 ಜನರಿಗೆ ಗಾಯ…
ಅಫ್ಘಾನಿಸ್ತಾನದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಭೂಕಂಪದಿಂದ ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ. ಅಲ್ಲಿನ ಮಾಧ್ಯಮ ವರದಿಗಳ ಪ್ರಕಾರ, 6.1 ತೀವ್ರತೆಯ ಈ ಭೂಕಂಪದಿಂದಾಗಿ ಕನಿಷ್ಠ 1000 ಜನರು ಸಾವನ್ನಪ್ಪಿದ್ದು, 1500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಖೋಸ್ಟ್ ನಗರದಿಂದ 40 ಕಿ.ಮೀ. ದೂರದಲ್ಲಿದೆ. ಮತ್ತೊಂದೆಡೆ, ಈ ಭೂಕಂಪದ ಪ್ರಭಾವವು 500 ಕಿಮೀ ವ್ಯಾಪ್ತಿಯೊಳಗೆ ಇತ್ತು ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಈ ಭೂಕಂಪದಿಂದಾಗಿ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದಲ್ಲಿ ಕಂಪನದ ಅನುಭವವಾಗಿದೆ.
https://twitter.com/i/status/1539545488738856961
ಭೂಕಂಪ ಪೀಡಿತ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ಸೇನಾ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇದಲ್ಲದೆ, ಸಹಾಯಕ್ಕಾಗಿ ತುರ್ತು ಏಜೆನ್ಸಿಗಳಿಗೂ ಮನವಿ ಮಾಡಲಾಗುತ್ತಿದೆ.
ಪಕ್ಟಿಕಾ ಪ್ರಾಂತ್ಯ ಭೂಕಂಪದಿಂದ ಹೆಚ್ಚು ಹಾನಿಗೊಳಗಾಗಿದೆ. ಭೂಕಂಪದ ಪ್ರಬಲತೆ ಎಷ್ಟು ತೀವ್ರವಾಗಿತ್ತೆಂದರೆ ಅದರ ಪರಿಣಾಮ ಪಾಕಿಸ್ತಾನ ಮತ್ತು ಭಾರತದ ವರೆಗೂ ಕಂಡು ಬಂದಿದೆ. ಭಾರತದ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.
ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲೂ ಕಂಪನ
ಮತ್ತೊಂದೆಡೆ, ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಇಸ್ಲಾಮಾಬಾದ್, ಪೇಶಾವರ್, ರಾವಲ್ಪಿಂಡಿ ಮತ್ತು ಮುಲ್ತಾನ್‌ನಲ್ಲಿಯೂ ಭೂಮಿ ಕಂಪಿಸಿದೆ. ಶುಕ್ರವಾರವೂ ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ.








