ಮುಂಬಯಿ: ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಆದರೆ, ವಿಜಯೋತ್ಸವದ ಸಂದರ್ಭದಲ್ಲಿ ಅಗ್ನಿ ಅವಘಡವೊಂದು ಸಂಭವಿಸಿದೆ.
ಮಹಾರಾಷ್ಟ್ರದ (Maharashtra) ಕೊಲ್ಲಾಪೂರ ಜಿಲ್ಲೆಯ ಮಹಗಾಂವ್ ಎಂಬಲ್ಲಿ ಈ ಘಟನೆ ನಡೆದಿದೆ. ಚಂದಗಡ ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಬಂಡಾಯ ಅಭ್ಯರ್ಥಿ ಶಿವಾಜಿ ಪಾಟೀಲ್ (Shivaji Patil) ಭರ್ಜರಿ ಜಯ ಸಾಧಿಸಿದ್ದರು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರು ಬಂಡಾಯವಾಗಿ ಸ್ಪರ್ಧೆ ಮಾಡಿದ್ದರು. ಆದರೂ ಮತದಾರರು ಅವರ ಕೈ ಹಿಡಿದಿದ್ದರು. ಗೆಲುವಿನ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ವಿಜಯೋತ್ಸವ ಆಚರಿಸುತ್ತಿದ್ದರು.
ಈ ವೇಳೆ ಮಹಿಳೆಯರು ನೂತನ ಶಾಸಕ ಶಿವಾಜಿ ಪಾಟೀಲ್ ಅವರಿಗೆ ಆರತಿ ಮಾಡುತ್ತಿದ್ದರು. ಈ ವೇಳೆ ಅಭಿಮಾನಿಗಳು ಜೆಸಿಬಿ ಮೂಲಕ ಬಣ್ಣ ಎರಚಲು ಮುಂದಾದರು. ಈ ವೇಳೆ ಗುಲಾಲ್ ಆರತಿ ಮೇಲೆ ಬಿದ್ದು, ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ನೂತನ ಶಾಸಕರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಬೆಂಕಿ ಹೊತ್ತಿಕೊಳ್ಳುತ್ತಲೇ ಜನ ಅಲ್ಲಿಂದ ಓಡಿದ್ದಾರೆ. ಅಲ್ಲದೇ ಬೆಂಕಿ ಸಹ ಕೂಡಲೇ ನಿಯಂತ್ರಣಕ್ಕೆ ಬಂದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.








