144 ವರ್ಷಗಳ ನಂತರ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಈಗ 9ನೇ ದಿನಕ್ಕೆ ಕಾಲಿಟ್ಟಿದೆ. 45 ದಿನಗಳ ಕಾಲ ನಡೆಯುವ ಈ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಪ್ರವೇಶಿಸುತ್ತಿದ್ದಾರೆ. ಪುಣ್ಯ ಸ್ನಾನ ಮಾಡಲು ಮತ್ತು ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಸಾವಿರಾರು ಮಂದಿ ಪ್ರಯಾಗರಾಜ್ ತಲುಪಿದ್ದಾರೆ.
ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಇನ್ಫೋಸಿಸ್ ನ ಸಹ-ಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಕೂಡ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಜನವರಿ 21ರಂದು ಪ್ರಯಾಗರಾಜ್ ತಲುಪಿದ ಸುಧಾ ಮೂರ್ತಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ, ಸೂರ್ಯ ದೇವರಿಗೆ ಜಲ ಅರ್ಪಿಸಿದರು.
ಮೂರು ದಿನಗಳ ಧಾರ್ಮಿಕ ಸಂಕಲ್ಪ:
ಸುಧಾ ಮೂರ್ತಿ ಮೂರು ದಿನಗಳ ಕಾಲ ಪ್ರಯಾಗರಾಜ್ ನಲ್ಲಿ ತಂಗಿ, ಪ್ರತಿದಿನ ಪವಿತ್ರ ಸ್ನಾನ ಮಾಡಲಿದ್ದಾರೆ. ಜೊತೆಗೆ ತಮ್ಮ ಪಿತೃಗಳಿಗೆ ತರ್ಪಣ ಅರ್ಪಿಸುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಹಾಕುಂಭ ಮೇಳವು ಜೀವಿತಾವಧಿಯಲ್ಲಿ ಒಂದು ಸಲ ಮಾತ್ರ ಸಿಗುವ ವಿಶೇಷ ಅವಕಾಶ. 144 ವರ್ಷಗಳಿಗೊಮ್ಮೆ ನಡೆಯುವ ಈ ಮಹೋತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ನನಗೆ ಭಾಗ್ಯ,” ಎಂದು ಹೇಳಿದ್ದಾರೆ.
ತಮಗೆ ಈ ಮಹಾಸಂಗಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ತುಂಬಾ ಸಂತೋಷ ಮತ್ತು ಧಾರ್ಮಿಕ ತೃಪ್ತಿಯನ್ನು ನೀಡಿದೆ ಎಂದು ಹೇಳಿದ ಸುಧಾ ಮೂರ್ತಿ, ತಮ್ಮ ಪೂರ್ವಜರ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸುವುದೂ ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು.
“ನನ್ನ ತಂದೆ-ತಾಯಿ ಸೇರಿದಂತೆ ಪೂರ್ವಜರಿಗೆ ಈ ಮಹಾಕುಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಅವರ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸುವುದು ನನ್ನ ಕರ್ತವ್ಯ ಎಂದು ನಂಬಿದ್ದೇನೆ,” ಎಂದು ಅವರು ತಿಳಿಸಿದ್ದಾರೆ.
ಮಹಾಕುಂಭ ಮೇಳ ಈ ಹಿಂದೂ ಸಂಸ್ಕೃತಿಯ ಪವಿತ್ರತೆಯ ಸಂಕೇತವಾಗಿದ್ದು, ಈ ಧಾರ್ಮಿಕ ಯಾತ್ರೆ ಸಾವಿರಾರು ಭಕ್ತರಿಗೆ ಶಾಂತಿ, ಪುಣ್ಯ ಮತ್ತು ಆಧ್ಯಾತ್ಮಿಕ ತೃಪ್ತಿಯನ್ನು ನೀಡುತ್ತಿದೆ.