ಬೆಂಗಳೂರು: ಬುಧವಾರ ಸದನದಲ್ಲಿ ಬಾರೀ ಕೋಲಾಹಲ ಉಂಟಾಗಿತ್ತು. ಬಿಜೆಪಿ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಬಿವೈ ವಿಜಯೇಂದ್ರ ಅವರು ಡಿಕೆ ಶಿವಕುಮಾರ್ ಅವರ ಬಳಿ ಒಂದು ಬಂಡಲ್ ಕಾಗದಪತ್ರಗಳನ್ನು ಒಯ್ದು ಸಹಿ ಮಾಡಿಸಿಕೊಂಡಿದ್ದಕ್ಕೆ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಹಿ ಮಾಡಿಸಿಕೊಂಡಿದ್ದು, ಅಲ್ಲದೇ, ಸುಮಾರು 25 ನಿಮಿಷಗಳ ಕಾಲ ಹರಟೆ ಹೊಡೆದಿದ್ದಾರೆ. ಇದು ನೈತಿಕ ಅಧಃಪತನ ಬಿಂಬಿಸುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಕುಮಾರ್ ರನ್ನು ಖುಷಿಪಡಿಸುವ ಪ್ರಯತ್ನ ವಿಜಯೇಂದ್ರ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತಿತ್ತು. ಕಾಂಗ್ರೆಸ್ ಮತ್ತು ಬಿಎಸ್ ಯಡಿಯೂರಪ್ಪ ಕುಟುಂಬದ ನಡುವೆ ಹೊಂದಾಣಿಕೆಯಾಗಿದೆ. ಹೀಗಾಗಿ ಪರಸ್ಪರ ಬ್ಲ್ಯಾಕ್ ಮೇಲ್ ಮಾಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಡಾ ಹಗರನವನ್ನು ಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲವೇ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು. ಹಗರಣಕ್ಕೆ ತಾರ್ಕಿಕ ಅಂತ್ಯ ಕಾಣಿಸುವವರೆಗೆ ತಾವು ಹೋರಾಟ ನಿಲ್ಲಿಸಲ್ಲ ಎಂದು ಯತ್ನಾಳ್ ಹೇಳಿದರು.
ಬಿಜೆಪಿ ನಾಯಕರು ಮೈಸೂರಿಂದ ಬೆಂಗಳೂರವರೆಗೆ ಪಾದಯಾತ್ರೆ ನಡೆಸುವ ವೃಥಾ ಕಾಲಹರಣದ ಸರ್ಕಸ್ ಬಿಟ್ಟರೆ ಮತ್ತೇನೂ ಅಲ್ಲ, ತಾನು ಕೇಂದ್ರದ ನಾಯಕರಿಗೆ ಹಗರಣ ಬಗ್ಗೆ ಪತ್ರ ಬರೆಯಲಿದ್ದು ಅಕ್ರಮದಲ್ಲಿ ಬಿಜೆಪಿ ನಾಯಕರ ಪಾತ್ರ ಇರುವುದನ್ನೂ ತಿಳಿಸುತ್ತೇನೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.








