American Airlines : ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜನೆ – ಅಮೆರಿಕಾದಿಂದ ದೆಹಲಿಗೆ ಬರುವಾಗ ಘಟನೆ…
ನ್ಯೂಯಾರ್ಕ್ ನಿಂದ ನವದೆಹಲಿಗೆ ತೆರಳುತ್ತಿದ್ದ ಅಮೆರಿಕನ್ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಅಮಲಿನಲ್ಲಿ ಪಕ್ಕದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ತಕ್ಷಣ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.
ನ್ಯೂಯಾರ್ಕ್ನಿಂದ ಅಮೆರಿಕನ್ ಏರ್ಲೈನ್ಸ್ ವಿಮಾನ ಶುಕ್ರವಾರ ರಾತ್ರಿ 9.16ಕ್ಕೆ ನವದೆಹಲಿ ಕಡೆ ಹೊರಟಿತ್ತು. ವಿಮಾನ ಹಾರಾಟದ ವೇಳೆ ಅಮೆರಿಕದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ನಿದ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅದು ಪಕ್ಕದಲ್ಲಿದ್ದ ಮತ್ತೊಬ್ಬ ಪ್ರಯಾಣಿಕರ ಮೇಲೆ ಬಿದ್ದಿದೆ. ವಿಮಾನ ಲ್ಯಾಂಡ್ ಆದ ನಂತರ ಆರೋಪಿಯನ್ನ ವಶಕ್ಕೆ ಪಡೆದ ಸಿಐಎಸ್ಎಫ್ ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಯಾಣಿಕರ ವಿವರಗಳ ಪ್ರಕಾರ, ವಿದ್ಯಾರ್ಥಿ ನಿದ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದು ತಮ್ಮ ಮೇಲೆ ಬಿದ್ದಿದೆ ಎಂದು ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ತಿಳಿಸಿದ್ದಾರೆ. ಆದರೆ, ಈ ವಿಷಯವನ್ನ ಪೊಲೀಸರ ಬಳಿ ಕೊಂಡೊಯ್ಯಬೇಡಿ ಎಂದು ವಿದ್ಯಾರ್ಥಿ ಸಹ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದ್ದಾನೆ. ಪ್ರಯಾಣಿಕರೂ ಈ ವಿಷಯವನ್ನ ಅಲ್ಲಿಗೆ ಬಿಟ್ಟಿದ್ದಾರೆ.
ಆದರೇ ವಿಮಾನದ ಸಿಬ್ಬಂದಿ ಈ ವಿಷಯವನ್ನು ಪೈಲಟ್ ಮೂಲಕ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಎಟಿಸಿ ಗಮನಕ್ಕೆ ತಂದಿದ್ದಾರೆ. ಎಟಿಸಿ ಅಧಿಕಾರಿಗಳು ಸಿಐಎಸ್ಎಫ್ ಸಿಬ್ಬಂದಿಗೆ ಸೂಚನೆ ನೀಡಿದ ಬಳಿಕ ವಿಮಾನ ಲ್ಯಾಂಡ್ ಆದ ಕೂಡಲೇ ಆರೋಪಿಯನ್ನು ಬಂಧಿಸಿ ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
American Airlines : Urinating while drunk – incident while coming from America to Delhi…