ಕೋಲ್ಕತ್ತಾ: ಭಾರತೀಯ ಜನತಾ ಪಕ್ಷದಲ್ಲಿ 75 ವರ್ಷ ತುಂಬಿದ ನಾಯಕರು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಬೇಕೆಂಬ ಅಲಿಖಿತ ನಿಯಮವಿದೆಯೇ? ಎಂಬ ಪ್ರಶ್ನೆಯು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಈ ವಿಷಯದ ಕುರಿತು ಕೇಳಲಾದ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪತ್ರಕರ್ತರ ವಿರುದ್ಧವೇ ಗರಂ ಆದ ಪ್ರಸಂಗ ನಡೆದಿದೆ.
ಮಾಧ್ಯಮ ಸಂವಾದದ ವೇಳೆ ನಡೆದಿದ್ದೇನು?
ಪಶ್ಚಿಮ ಬಂಗಾಳದ ಪ್ರವಾಸ ಮತ್ತು ಅಲ್ಲಿನ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡುತ್ತಿದ್ದ ವೇಳೆ, ಪತ್ರಕರ್ತರೊಬ್ಬರು ಬಿಜೆಪಿಯ ಆಂತರಿಕ ನಿಯಮದ ಬಗ್ಗೆ ಪ್ರಸ್ತಾಪಿಸಿದರು. 75 ವರ್ಷ ತುಂಬಿದ ನಂತರ ಬಿಜೆಪಿ ನಾಯಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಬೇಕೇ? ಎಂಬ ಪ್ರಶ್ನೆ ತೂರಿಬಂತು. ಈ ಪ್ರಶ್ನೆಯನ್ನು ಕೇಳುತ್ತಿದ್ದಂತೆಯೇ ಸಹನೆ ಕಳೆದುಕೊಂಡಂತೆ ಕಂಡ ಅಮಿತ್ ಶಾ, ನನ್ನ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ನೀವು ಬಂಗಾಳದ ಬಗ್ಗೆ ಚಿಂತಿಸಬೇಕೇ ಹೊರತು, ನನ್ನ ಬಗ್ಗೆ ಅಥವಾ ಬಿಜೆಪಿ ನಿಯಮಗಳ ಬಗ್ಗೆ ಅಲ್ಲ ಎಂದು ಖಾರವಾಗಿಯೇ ಉತ್ತರಿಸಿದರು.
ಏನಿದು 75 ವರ್ಷದ ಅಲಿಖಿತ ನಿಯಮ?
ಬಿಜೆಪಿಯ ಸಂವಿಧಾನದಲ್ಲಿ ಎಲ್ಲಿಯೂ 75 ವರ್ಷ ತುಂಬಿದವರು ಕಡ್ಡಾಯವಾಗಿ ನಿವೃತ್ತರಾಗಬೇಕು ಎಂದು ಲಿಖಿತವಾಗಿ ಉಲ್ಲೇಖಿಸಿಲ್ಲ. ಆದರೆ, 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಪಕ್ಷದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಯಿತು. 75 ವರ್ಷ ದಾಟಿದ ನಾಯಕರನ್ನು ಸಕ್ರಿಯ ರಾಜಕಾರಣ ಮತ್ತು ಸಚಿವ ಸ್ಥಾನಗಳಿಂದ ದೂರವಿಡುವ ಪರಿಪಾಠವನ್ನು ಬೆಳೆಸಿಕೊಂಡು ಬರಲಾಯಿತು.
ಇದಕ್ಕಾಗಿ ಮಾರ್ಗದರ್ಶಕ ಮಂಡಳಿ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸಲಾಯಿತು. ಪಕ್ಷದ ಹಿರಿಯ ನಾಯಕರು ತಮ್ಮ ಅಪಾರ ಅನುಭವದ ಮೂಲಕ ಸರ್ಕಾರಕ್ಕೆ ಮತ್ತು ಹೊಸ ನಾಯಕತ್ವಕ್ಕೆ ಮಾರ್ಗದರ್ಶನ ನೀಡಲಿ ಎಂಬ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ವಾಸ್ತವದಲ್ಲಿ ಈ ಮಂಡಳಿಯು ಸಕ್ರಿಯವಾಗಿಲ್ಲ ಎಂಬ ಟೀಕೆಗಳು ಹಲವು ಬಾರಿ ಕೇಳಿಬಂದಿವೆ. 2015ರ ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಒಮ್ಮೆ ಪತ್ರಿಕಾ ಹೇಳಿಕೆ ನೀಡಿದ್ದನ್ನು ಬಿಟ್ಟರೆ, ಈ ಮಂಡಳಿ ಮತ್ತೆಂದೂ ಗಂಭೀರವಾಗಿ ಸಭೆ ಸೇರಿದ ಅಥವಾ ಸಲಹೆ ನೀಡಿದ ಉದಾಹರಣೆಗಳಿಲ್ಲ.
ಈ ವಿಷಯ ಈಗ ಚರ್ಚೆಗೆ ಬರಲು ಬಲವಾದ ಕಾರಣಗಳಿವೆ. ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಪಟೇಲ್ ಅವರು ತಮಗೆ 75 ವರ್ಷ ತುಂಬುವ ಮುನ್ನವೇ, ಪಕ್ಷದ ನಿಯಮದ ಗೌರವಾರ್ಥ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದರು.
ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರಂತಹ ಘಟಾನುಘಟಿ ನಾಯಕರನ್ನು ಮೂಲೆಗುಂಪು ಮಾಡಲು ಮತ್ತು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಈ ವಯಸ್ಸಿನ ಮಿತಿಯ ತಂತ್ರ ಹೂಡಲಾಗಿದೆ ಎಂದು ಅವರು ನೇರವಾಗಿಯೇ ಆರೋಪಿಸಿದ್ದರು. 2014ರ ನಂತರ ಅನೇಕ ಹಿರಿಯ ನಾಯಕರು ಇದೇ ಕಾರಣಕ್ಕೆ ಸಚಿವ ಸ್ಥಾನಗಳನ್ನು ತ್ಯಜಿಸಬೇಕಾಯಿತು.
ಕುತೂಹಲಕಾರಿ ಸಂಗತಿಯೆಂದರೆ, 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರೇ ದಿ ವೀಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, 75 ವರ್ಷ ಮೇಲ್ಪಟ್ಟ ಯಾರಿಗೂ ಈ ಬಾರಿ ಟಿಕೆಟ್ ನೀಡಲಾಗಿಲ್ಲ, ಇದು ಪಕ್ಷದ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದರು. ಅಂದು ಪಕ್ಷದ ನಿರ್ಧಾರ ಎಂದು ಸಮರ್ಥಿಸಿಕೊಂಡಿದ್ದ ಶಾ, ಇಂದು ಅದೇ ಪ್ರಶ್ನೆಗೆ ಕೋಪಗೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.








