ಹೆತ್ತ ಮಗಳೊಬ್ಬಳು ತಾಯಿಯನ್ನೇ ಕೊಲೆ ಮಾಡಿ, ಮಣ್ಣು ಮಾಡಿ ನಾಪತ್ತೆಯಾಗಿರುವ ಬಣ್ಣ ಕಟ್ಟಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಪೊಲೀಸರು 13 ತಿಂಗಳ ನಂತರ ಈ ಪ್ರಕರಣವನ್ನು ಭೇದಿಸಿದ್ದಾರೆ. ಮಂಡ್ಯ ತಾಲೂಕಿನ ಹೆಬ್ಬಾಕವಾಡಿ ಗ್ರಾಮದ ಶಾರದಮ್ಮ (52) ಕೊಲೆಯಾದ ಮಹಿಳೆ ಎನ್ಲನಾಗಿದೆ. ಶಾರದಮ್ಮ ಅವರ ಪತಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಆನಂತರ ತಮಗಿದ್ದ ಒಬ್ಬಳೇ ಮಗಳಾದ ಅನುಷಾಳನ್ನು ಮೈಸೂರು ಜಿಲ್ಲೆಯ ಹಾರೋಹಳ್ಳಿಯ ದೇವರಾಜ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದರು.
ತಾಯಿಗೆ ಕಣ್ಣಿನ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಕರೆಯಿಸಿ, ಚಿಕಿತ್ಸೆ ಕೊಡಿಸಿ ಮಗಳು ಹೆಬ್ಬಕವಾಡಿ ಗ್ರಾಮಕ್ಕೆ ಕಳುಹಿಸಿದ್ದಳು. ಚಿಕಿತ್ಸೆಯ ವಿಷಯದಲ್ಲಿ ತಾಯಿ ಹಾಗೂ ಮಗಳಿಗೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಅನುಷಾ ನವೆಂಬರ್ 22ರಂದು ನಲ್ಲಿ ತವರು ಮನೆಗೆ ಬಂದಿದ್ದಳು. ಆಗ ಮತ್ತೆ ತಾಯಿ- ಹಾಗೂ ಮಗಳ ಮಧ್ಯೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಮಗಳು ನೂಕಿದ್ದಾಳೆ.
ಮಂಚಕ್ಕೆ ತಲೆ ತಗುಲಿ ಶಾರದಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಭಯದಿಂದಾಗಿ ಅನುಷಾ ಹಾಗೂ ಆಕೆಯ ಗಂಡ ದೇವರಾಜು ಇಬ್ಬರು ಸೇರಿ ಹೆಬ್ಬಾಕವಾಡಿ ಗ್ರಾಮದ ಮನೆಯ ಹತ್ತಿರ ಇದ್ದ ಸ್ಮಶಾಣದಲ್ಲಿ ರಾತ್ರೋರಾತ್ರಿ ಗುಂಡಿ ತೆಗೆದು ಶವವನ್ನು ಮಣ್ಣು ಮಾಡಿದ್ದಾರೆ. ಆನಂತರ ಸಂಬಂಧಿಕರಿಗೆ ಯಾರದೋ ಜೊತೆ ಓಡಿ ಹೋಗಿದ್ದಾಳೆ ಎಂದು ಕತೆ ಕಟ್ಟಿದ್ದಾರೆ. ಆನಂತರ ತಾನೇ ವರುಣಾ ಪೊಲೀಸ್ ಠಾಣೆಯಲ್ಲಿ ಜೂನ್ ನಲ್ಲಿ ದೂರು ದಾಖಲಿಸಿದ್ದಾಳೆ. ನಂತರ ಪೊಲೀಸರ ತನಿಖೆಯಲ್ಲಿ ಸತ್ಯ ಬಯಲಿಗೆ ಬಂದಿದ್ದು, ಮಗಳು ಹಾಗೂ ಅಳಿಯನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.