ಮಧ್ಯಪ್ರದೇಶ: ರಾಜ್ಯದಲ್ಲಿ ಇತ್ತೀಚೆಗಷ್ಟೇ 2 ವರ್ಷದ ಬಾಲಕ ಬೋರ್ ವೆಲ್ ಗೆ ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ ಘಟನೆಯೊಂದು ನಡೆದಿತ್ತು. ಇದು ಮಾಸುವ ಮುನ್ನವೇ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ.
6 ವರ್ಷದ ಬಾಲಕ ಬೋರ್ ವೆಲ್ ಗೆ ಬಿದ್ದಿದ್ದಾನೆ. ಗ್ರಾಮದಲ್ಲಿ ಮಧ್ಯಾಹ್ನ ಆಟವಾಡುವ ಸಂದರ್ಭದಲ್ಲಿ ಬಾಲಕ ಬೋರ್ ವೆಲ್ ಗೆ ಬಿದ್ದಿದ್ದಾನೆ. ಮಗು ಸುಮಾರು 40 ಅಡಿ ಆಳದಲ್ಲಿ ಸಿಲುಕಿಕೊಂಡಿದೆ. ಘಟನೆಯ ನಂತರ, ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆಯ ತಂಡವು ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.
ಅಧಿಕಾರಿಗಳು ಪೈಪ್ ಮೂಲಕ ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ, ಬಾಲಕನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಿಸಿಟಿವಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ. ಆದರೆ, ಅಡಚಣೆಯಿಂದಾಗಿ ಕ್ಯಾಮೆರಾ ಬಾಲಕನನ್ನು ತಲುಪಿಲ್ಲ ಎಂದು ಹೆಚ್ಚುವರಿ ಎಸ್ಪಿ ಅನಿಲ್ ಸೋಂಕರ್ ಮಾಹಿತಿ ನೀಡಿದ್ದಾರೆ. ಬೋರ್ ವೆಲ್ ಸುಮಾರು 70 ಅಡಿ ಆಳವಿದ್ದು, ಮಗು ರಕ್ಷಿಸಲು ಮತ್ತೊಂದು ಸಮಾನಾಂತರ ಹೊಂಡ ತೋಡಲಾಗುತ್ತಿದೆ ಎಂದು ಹೇಳಿದ್ದಾರೆ.