ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮತ್ತೊಂದು ವಂದೇ ಭಾರತ್ ರೈಲು ಸಂಚರಿಸುತ್ತಿದೆ.
ಬೆಂಗಳೂರು ಮೂಲಕ ಮೈಸೂರು ಹಾಗೂ ಚೈನ್ನೆಗೆ ಈ ರೈಲು ಸಂಪರ್ಕ ಕಲ್ಪಿಸಲಿದೆ. ಮೈಸೂರಿನಲ್ಲಿ ಪ್ರೀಮಿಯಂ ರೈಲನ್ನು ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ಈ ರೈಲಿಗೆ ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಆನ್ಲೈನ್ ಮೂಲಕ ಚಾಲನೆ ನೀಡಿದ್ದರು. ಆನಂತರ ಅದು ಭಾಗಶಃ ಸಂಚಾರ ಮಾಡಿತ್ತು. ಇಂದಿನಿಂದ ಅಧಿಕೃತವಾಗಿ ಸಂಚರಿಸಲಿದೆ.
ಮಾರ್ಚ್ 14 ರಿಂದ ಏಪ್ರಿಲ್ 4 ರ ನಡುವಣ ಅವಧಿಯಲ್ಲಿ ರೈಲು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು ಬೈಯಪ್ಪನಹಳ್ಳಿ ಮತ್ತು ಚೆನ್ನೈ ಸೆಂಟ್ರಲ್ ನಡುವೆ ಸಂಚರಿಸುತ್ತಿತ್ತು. ಈ ರೈಲು ಬುಧವಾರ ಹೊರತು ಪಡಿಸಿ ಪ್ರತಿ ದಿನವೂ ಸಂಚರಿಸಲಿದೆ.
ಮೈಸೂರು ಮತ್ತು ಚೆನ್ನೈ ನಡುವಿನ ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿದೆ. ಈಗಾಗಲೇ ಮೊದಲ (ರೈಲು ಸಂಖ್ಯೆ 20607/20608) ರೈಲು 2022 ರ ನವೆಂಬರ್ ತಿಂಗಳಿನಿಂದ ಸಂಚರಿಸುತ್ತಿದೆ. ಇದು ಚೆನ್ನೈ ಸೆಂಟ್ರಲ್ನಿಂದ ಬೆಳಿಗ್ಗೆ 5.50 ಕ್ಕೆ ಹೊರಟು ಮಧ್ಯಾಹ್ನ 12.20 ಕ್ಕೆ ಮೈಸೂರು ತಲುಪುತ್ತದೆ. ಮೈಸೂರಿನಿಂದ ಮಧ್ಯಾಹ್ನ 1.05 ಕ್ಕೆ ಹೊರಟು ರಾತ್ರಿ 7.20 ಕ್ಕೆ ಚೆನ್ನೈ ತಲುಪುತ್ತದೆ.