ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡುವ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡ ನಿರ್ಧಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರೇನು ಶಾಶ್ವತವಾಗಿ ಅಧಿಕಾರದಲ್ಲಿರ್ತಾರಾ? ಪರಿಸ್ಥಿತಿ ಮುಂದೆ ಬದಲಾಗುತ್ತೆ. ಆಗ ಇವರು ಇಟ್ಟ ಹೆಸರೂ ಬದಲಾಗಬಹುದು, ಎಂದು ತೀವ್ರ ವಾಗ್ದಾಳಿ ನಡೆಸಿದರು.
ರಾಮನಗರ ಜಿಲ್ಲೆಯ ಇತಿಹಾಸ ಹಾಗೂ ರಾಜಕೀಯವಾಗಿ ಇದ್ದ ಕೊಡುಗೆಯನ್ನು ಉದಾಹರಿಸಿದ ಕುಮಾರಸ್ವಾಮಿ, ಈ ಜಿಲ್ಲೆ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟಿದೆಯೆಂಬ ಗೌರವವಿದೆ. ಇಂಥ ಜಿಲ್ಲೆಗೆ ಯಾರೋ ರಾಜಕೀಯ ಲಾಭಕ್ಕಾಗಿ ಹೊಸ ಹೆಸರು ಇಡುವುದು ಸರಿಯಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಂಗಲ್ ಹನುಮಂತಯ್ಯ ಹೆಸರು ಇದ್ದರೆ ಅಭಿನಂದನೆ ನೀಡುತ್ತಿದ್ದೆ:
ಇಲ್ಲಿ ರಾಜಕೀಯ ಉದ್ದೇಶವಿಲ್ಲದೆ ಯಾರಾದರೂ ಈ ಜಿಲ್ಲೆಗೆ ಕೆಂಗಲ್ ಹನುಮಂತಯ್ಯ ಅವರಂತಹ ದಿಗ್ಗಜ ನಾಯಕನ ಹೆಸರನ್ನು ಇಟ್ಟಿದ್ದರೆ, ನಾನು ಖಂಡಿತ ಅಭಿನಂದಿಸುತ್ತಿದ್ದೆ. ಆದರೆ ಈಗಿರುವುದು ರಾಜಕೀಯ ಲಾಭಕ್ಕಾಗಿ ಮಾತ್ರ. ಇದು ನಿಜಕ್ಕೂ ಖೇದಕಾರಿ ಎಂದು ಹೇಳಿದರು.








