ಏಷ್ಯಾಕಪ್-2023 ಅರ್ಹತೆ ಪಡೆದ ಭಾರತದ ಫುಟ್ಬಾಲ್ ತಂಡ
ಭಾರತ ಫುಟ್ಬಾಲ್ ತಂಡ ಏಷ್ಯಾಕಪ್-2023ಕ್ಕೆ ಅರ್ಹತೆ ಪಡೆದಿದೆ. ಭಾರತ ಸತತ ಎರಡನೇ ಬಾರಿಗೆ ಏಷ್ಯಾಕಪ್ ಆಡುತ್ತಿರುವುದು ಇದೇ ಮೊದಲು. ಎಸಿಎಫ್ ಅರ್ಹತಾ ಪಂದ್ಯಗಳಲ್ಲಿ ಪ್ಯಾಲೆಸ್ಟೈನ್ ಗೆಲುವಿನಿಂದಾಗಿ ಭಾರತಕ್ಕೆ ಅವಕಾಶದ ಬಾಗಿಲು ತೆರೆದಿದೆ.
ಒಟ್ಟಾರೆ ಅರ್ಹತೆ ಕುರಿತು ಮಾತನಾಡುವುದಾದರೆ, ಭಾರತ ಐದನೇ ಬಾರಿಗೆ ಈ ಸ್ಪರ್ಧೆಗೆ ಅರ್ಹತೆ ಪಡೆದಿದೆ. ಏಷ್ಯಾ ಕಪ್ ಮುಂದಿನ ವರ್ಷ ಜೂನ್ 16 ರಿಂದ ಜುಲೈ 16 ರವರೆಗೆ ಚೀನಾದಲ್ಲಿ ನಡೆಯಲಿದೆ. 2019ರಲ್ಲಿ ಭಾರತ ತಂಡ ಏಷ್ಯಾಕಪ್‌ನಲ್ಲಿ ಆಡಿದಾಗ ಗ್ರೂಪ್ ಹಂತದ 3 ಪಂದ್ಯಗಳಲ್ಲಿ 2 ರಲ್ಲಿ ಸೋತು ಕೊನೆಯ ಸ್ಥಾನದಲ್ಲಿತ್ತು.
ಪ್ಯಾಲೆಸ್ತೀನ್‌ನ ಗೆಲುವಿನ ಲಾಭ ಭಾರತಕ್ಕೆ
ಪ್ಯಾಲೆಸ್ತೀನ್ ಗೆಲುವಿನ ಲಾಭ ಟೀಂ ಇಂಡಿಯಾಕ್ಕೆ ಸಿಕ್ಕಿದೆ. ಮಂಗಳವಾರ ನಡೆದ ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಪ್ಯಾಲೆಸ್ತೀನ್ 4-0 ಗೋಲುಗಳಿಂದ ಫಿಲಿಪ್ಪೀನ್ಸ್ ತಂಡವನ್ನು ಸೋಲಿಸಿದ್ದರಿಂದ, ಭಾರತ ತನ್ನ ಕೊನೆಯ ಪಂದ್ಯವನ್ನು ಆಡದೆ ಏಷ್ಯಾಕಪ್‌ಗೆ ಅರ್ಹತೆ ಪಡೆದುಕೊಂಡಿತು.
ಎರಡನೇ ಸ್ಥಾನದಲ್ಲಿ ಭಾರತ
ಸದ್ಯದ ಪರಿಸ್ಥಿತಿಯಲ್ಲಿ ಭಾರತ ತಂಡ ಅಂಕಪಟ್ಟಿಯಲ್ಲಿ ಫಿಲಿಪ್ಪೀನ್ಸ್‌ಗಿಂತ ಎರಡು ಅಂಕಗಳಿಂದ ಮುನ್ನಡೆಯಲ್ಲಿದೆ. ಭಾರತ ಅಂಕಪಟ್ಟಿಯಲ್ಲಿ 6 ಪಾಯಿಂಟ್ ಗಳನ್ನ ಹೊಂದಿದ್ದರೆ, ಫಿಲಿಪೈನ್ಸ್ 4 ಅಂಕಗಳನ್ನು ಹೊಂದಿದೆ.
ಇದೀಗ ಭಾರತ ತಂಡದ ಕಣ್ಣು ಹಾಂಕಾಂಗ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವತ್ತ ನೆಟ್ಟಿದೆ.
ಇಂದು ರಾತ್ರಿ ಹಾಂಗ್ ಕಾಂಗ್ ವಿರುದ್ಧ ಪಂದ್ಯ
ಭಾರತ ತಂಡ ತನ್ನ ಕೊನೆಯ ಲೀಗ್ ಪಂದ್ಯವನ್ನು ಮಂಗಳವಾರ ರಾತ್ರಿ 8:30 ಕ್ಕೆ ಹಾಂಕಾಂಗ್ ವಿರುದ್ಧ ಆಡಲಿದೆ. ಭಾರತ ತನ್ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 2-1 ಗೋಲುಗಳಿಂದ ಸೋಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.