ಏಷ್ಯಾದಲ್ಲೇ ಮೊದಲು : ಚೆನ್ನೈನಲ್ಲಿ ಫ್ಲೈಯಿಂಗ್ ಕಾರಿನ ಪರಿಚಯ
ಚೆನ್ನೈ ಮೂಲದ ಸ್ಟಾರ್ಟ್ಅಪ್ ಹೈಬ್ರಿಡ್ ಫ್ಲೈಯಿಂಗ್ ಕಾರಿನ ಪರಿಕಲ್ಪನೆಯ ಮಾದರಿಯನ್ನು ಪರಿಚಯಿಸಿದೆ. ಹಾರುವ ಕಾರಿನ ಮಾದರಿಯನ್ನು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪರಿಶೀಲಿಸಿದ್ದಾರೆ. ಬಳಿಕ ಈ ಬಗ್ಗೆ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ ಮಾಡಿ ಇದು ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರ್ ಎನಿಸಿಕೊಳ್ಳುವ ಪರಿಕಲ್ಪನೆಯ ಮಾದರಿಯಾಗಿದ್ದು, ಇದನ್ನ ಪರಿಚಯಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ಅಧಿಕೃತವಾಗಿ ಚಾಲನೆ ಪಡೆದುಕೊಂಡ ನಂತರ ಹಾರುವ ಕಾರುಗಳನ್ನು ಜನರು ಮತ್ತು ಸರಕು ಸಾಗಣೆಗೆ ಹಾಗೂ ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸಲು ಬಳಸಲಾಗುತ್ತದೆ. ತಂಡಕ್ಕೆ ನನ್ನ ಶುಭಾಶಯಗಳು ಎಂದಿದ್ದಾರೆ.
ಹೈಬ್ರಿಡ್ ಕಾರ್ ಮಾದರಿಯಾದ ಈ ಇದಕ್ಕೆ ‘ವಿನತಾ’ ಎಂದು ಹೆಸರಿಡಲಾಗಿದ್ದು, ವಿನತಾ ಏರೋಮೊಬಿಲಿಟಿ ಅಭಿವೃದ್ಧಿಪಡಿಸಿದೆ. ಈ ಹೆಸರಿನ ಬಗ್ಗೆ ಸ್ಟಾರ್ಟಪ್ ನ ಸಿಇಒ ಯೋಗೀಶ್ ಅಯ್ಯರ್ ಅವರು ಮಾತನಾಡಿದ್ದು, ದೀರ್ಘಕಾಲದ ಸಂಶೋಧನೆಯ ನಂತರ ಈ ಹೆಸರನ್ನು ಆಯ್ಕೆ ಮಾಡಲಾಗಿದೆ ಮತ್ತು ಇದರ ಅರ್ಥ ‘ಎಲ್ಲಾ ಪಕ್ಷಿಗಳ ತಾಯಿ’ ಎಂದು ತಿಳಿಸಿದ್ದಾರೆ. ವಿನತ ಪುರಾತನ ಪುರಾಣದಿಂದ ಬಂದಿದೆ. ನಾವು ಹಾರುವ ಕಾರಿನೊಂದಿಗೆ ಕೆಲಸ ಮಾಡುತ್ತಿದ್ದೇವೆ ಆದ್ದರಿಂದ ನಾವು ಸಾಕಷ್ಟು ಸಂಶೋಧನೆ ಮಾಡಿದ್ದೇವೆ ಮತ್ತು ವಿನತಾ ಹೆಸರಿಡಲು ನಿರ್ಧರಿಸಿದ್ದೇವೆ. ಅಂದರೆ ಪಕ್ಷಿಗಳ ತಾಯಿ, ಗರುಡನ ತಾಯಿ ಎಂದು ಯೋಗೀಶ್ ಅಯ್ಯರ್ ಹೇಳಿದರು.
ಈ ಕಾರಿನ ತೂಕ 1,100 ಕೆಜಿ. ಇದು ಗರಿಷ್ಠ 1,300 ಕೆಜಿ ತೂಕ ಹೊರುವ ಸಾಮರ್ಥ್ಯ ಹೊಂದಿದೆ. ಈ ಫ್ಲೈಯಿಂಗ್ ಕಾರು 8 ಏಕಾಕ್ಷ ರೋಟರ್, ಜೈವಿಕ ಇಂಧನ ಮತ್ತು ಬ್ಯಾಟರಿ ಮೂಲಕ ಚಲಿಸುವ ಹೈಬ್ರಿಡ್ ಮೋಟಾರ್ ಹೊಂದಿರುತ್ತದೆ. ಈ ಕಾರನ್ನು ಇಬ್ಬರು ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಗಂಟೆಗೆ 100-120 ಕಿಮೀ ವೇಗದಲ್ಲಿ ಹಾರಬಹುದಾಗಿದೆ.