Belagavi: ಚಾಲಕನ ನಿಯಂತ್ರಣ ತಪ್ಪಿ ನಾಲಗೆ ಬಿದ್ದ ಕಾರು – 8 ಮಂದಿ ಮೃತ
ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ ನಾಲೆಗೆ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಕಲ್ಯಾಳ್‌ಪೂಲ್ ಬಳಿ ಇಂದು(ಭಾನುವಾರ) ನಡೆದಿದೆ. ಮೃತಪಟ್ಟವರೆಲ್ಲ ಕೂಲಿ ಕಾರ್ಮಿಕರಾಗಿದ್ದು ಕೆಲಸಕ್ಕೆ ತೆರಳುತ್ತಿದ್ದರು.
ಕ್ರೂಸರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ 8 ಮಂದಿ ಮೃತಪಟ್ಟಿದ್ದಾರೆ. ಮೃತರನ್ನ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದವರು ಎಂದು ಗುರುತಿಸಲಾಗಿದೆ.
ಅಕ್ಕತಂಗೇರಹಾಳ ಗ್ರಾಮದ ಅಡಿವೆಪ್ಪ ಚಿಲಬಾಂವಿ (27), ಬಸವರಾಜ್ ದಳವಿ (30), ಬಸವರಾಜ ಹನಮನ್ನವರ (51), ಆಕಾಶ ಗಸ್ತಿ (22), ಗೋಕಾಕ್ ತಾಲೂಕಿನ ದಾಸನಟ್ಟಿ ಗ್ರಾಮದ ಫಕಿರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30), ಮಲ್ಲಾಪುರ(ಎಸ್‌ಎ) ಗ್ರಾಮದ ಬಸವರಾಜ ಸನದಿ (35) ಮೃತಪಟ್ಟವರು ಎಂದು ತಿಳಿದುಬಂದಿದೆ
ಕ್ರೂಸರ್ ವಾಹನದಲ್ಲಿ ಒಟ್ಟು 17 ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಬೆಳಗಾವಿ ಪೋಲಿಸ್ ಕಮೀಶನರ್ ಡಾ. ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.








