ಚೀನಾಗೆ ಗುನ್ನಾ ಕೊಟ್ಟ ಆಸ್ಟ್ರೇಲಿಯಾ – ಚೀನಾ ಕಂಪನಿ ಜೊತೆಗಿನ ಒಪ್ಪಂದ ಮುರಿಯುವ ನಿರ್ಧಾರ
ಉತ್ತರ ಆಸ್ಟ್ರೇಲಿಯಾದ ಡಾರ್ವಿನ್ ನಗರದಲ್ಲಿರೋ ಮಿಲಿಟರಿ ಬಂದರನ್ನ ಚೀನಾ ಮೂಲದ ಕಂಪನಿಗೆ ಲೀಸ್ಗೆ ಕೊಟ್ಟಿರೋ ನಿರ್ಧಾರವನ್ನ ಪುನರ್ ಪರಿಶೀಲಸಲು ಆಸ್ಟ್ರೇಲಿಯಾ ಮುಂದಾಗಿದೆ. ಚೀನಾದ ಲ್ಯಾಂಡ್ಬ್ರಿಜ್ ಗ್ರೂಪ್ಗೆ ಈ ಬಂದರನ್ನ 99 ವರ್ಷ ಕಾಲ ಲೀಸ್ಗೆ ಕೊಡಲು 2015ರಲ್ಲಿ ಒಪ್ಪಂದವಾಗಿತ್ತು. ಆದ್ರೆ ಲ್ಯಾಂಡ್ಬ್ರಿಜ್ ಕಂಪನಿಯು ಚೀನಾ ಸೇನೆ ಜೊತೆ ನಿಕಟ ಸಂಬಂಧ ಹೊಂದಿದೆ ಅಂತ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಚೀನಾ ಕಂಪನಿಗೆ ಆಸ್ಟ್ರೇಲಿಯಾ ತನ್ನ ಮಿಲಿಟರಿ ಬಂದರನ್ನ ಲೀಸ್ಗೆ ಕೊಡ್ತಿರೋದು ಅಮೆರಿಕದ ಕೆಂಗಣ್ಣಿಗೂ ಗುರಿಯಾಗಿತ್ತು.
2015ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಈ ಬಗ್ಗೆ ಅಂದಿನ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕೋಮ್ ಟರ್ನ್ಬುಲ್ ಬಳಿ ಅಸಮಾಧಾನ ವ್ಯಕ್ತಪಡಿಸಿದ್ರು. ಕಳೆದ ವಾರವಷ್ಟೇ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮಾತನಾಡಿ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಬಂದರುಗಳ ಮಾಲೀಕತ್ವ ಬಗ್ಗೆ ಕ್ರಮ ಕೈಗೊಳ್ಳೋದಾಗಿ ಹೇಳಿದ್ದರು. ಇದೀಗ ಡಾರ್ವಿನ್ ಪೋರ್ಟ್ನ ಲೀಸ್ ಚೀನಾ ಕಂಪನಿಗೆ ಕೊಟ್ಟಿದ್ದನ್ನ ಪುನರ್ ಪರಿಶೀಲಸಲು ಮುಂದಾಗಿದೆ.