ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರನ್ನೇ ಮುಂದುವರಿಸಬೇಕು ಹಾಗೂ ಅವರ ವಿರುದ್ಧ ಹೇಳಿಕೆ ನೀಡುತ್ತಿರುವವರನ್ನು ಪಕ್ಷದಿಂದ ಈ ಕೂಡಲೇ ಉಚ್ಚಾಟಿಸಬೇಕು ಎಂದು B.Y. ವಿಜಯೇಂದ್ರ ಗುಂಪಿನ ಕೆಲವು ನಾಯಕರುಗಳು ಆಗ್ರಹಿಸಿದ್ದಾರೆ.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಮಂಗಳವಾರ ಸಭೆ ನಡೆಸಿದ ನಾಯಕರು, ವಿಜಯೇಂದ್ರರನ್ನೇ ಮುಂದಿನ 3 ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಮುಂದುವರಿಸಬೇಕು, ರಾಜ್ಯಾಧ್ಯಕ್ಷರು, ಪಕ್ಷದ ವಿರುದ್ಧ ಮಾತನಾಡುತ್ತಿರುವವರ ವಿರುದ್ಧ ಇದುವರೆಗೆ ಏಕೆ ಕಠಿಣ ಕ್ರಮ ಜರುಗಿಸಿಲ್ಲ?, ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಇನ್ನಿತರರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂಬ ಪ್ರಮುಖ ನಿರ್ಣಯಗಳ ಬಗ್ಗೆ ಮಾತುಕತೆಗಳು ಆಗಿದೆಯೆಂದು ತಿಳಿದುಬಂದಿದೆ.
ಈ ಕುರಿತು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ನಾವೆಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಸದಸ್ಯತ್ವ ನೋಂದಣಿ ಆಗಿದೆ. ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕಿದೆ. ಮಾಜಿ ನಾಯಕರುಗಳ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ರಾಜ್ಯದೆಲ್ಲೆಡೆ ತಿರುಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟಿದ್ದಾರೆ. ವಿಧಾನಸಭಾ ಚುನಾವಣೆಗೂ B.Y.ವಿಜಯೇಂದ್ರ ಅವರೇ ಮುಂದುವರಿಯಬೇಕು ಎಂಬುದು ನಮ್ಮೆಲ್ಲರ ಆಶಯ ಮತ್ತು ಅಭಿಪ್ರಾಯ ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರಿಗೆ ಇದನ್ನು ಮನವರಿಕೆ ಮಾಡಿಕೊಡುತ್ತೇವೆ. ನಮ್ಮ ಹೈಕಮಾಂಡ್ ಸಮರ್ಥವಾಗಿದೆ. ಕೆಲವರು ರಾಷ್ಟ್ರೀಯ ನಾಯಕರ ದಾರಿ ತಪ್ಪಿಸುತ್ತಿದ್ದಾರೆ. ಅದನ್ನೂ ಮನವರಿಕೆ ಮಾಡಿಕೊಡುತ್ತೇವೆ. ಶೀಘ್ರದಲ್ಲೇ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದರು.
ಈ ಸಂಬಂಧ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾತನಾಡಿ ನಾವೆಲ್ಲ ಒಂದೇ ಮನಸ್ಸಿನಲ್ಲಿದ್ದೇವೆ. ಮುಂದಿನ ಚುನಾವಣೆಗಳಲ್ಲಿ ಪಕ್ಷ ಗೆಲ್ಲಬೇಕು. ಗೆಲ್ಲುವ ಶಕ್ತಿ ಇರುವ, ಪರ್ಯಾಯ ಅಭ್ಯರ್ಥಿಗಳು ಇಲ್ಲದ ಕ್ಷೇತ್ರದವರೇ ಬಹುತೇಕ ಸಭೆ ನಡೆಸಿದ್ದೇವೆ. ಇದನ್ನೂ ವರಿಷ್ಠರ ಗಮನಕ್ಕೆ ತರುತ್ತೇವೆ. ಪಕ್ಷದ ವಿರುದ್ಧ ಮಾತನಾಡುತ್ತಿದ್ದವರ ಬಾಯಿಗಳು ಎರಡ್ಮೂರು ದಿನದಲ್ಲಿ ಬಂದ್ ಆಗಲಿವೆ. ಫೆಬ್ರವರಿ ಮೊದಲ ವಾರದಲ್ಲಿ ವಿಜಯೇಂದ್ರ ಅಧ್ಯಕ್ಷರಾಗುತ್ತಾರೆ. ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದರು.