ಧಾರವಾಡ: ಬೆಂಗಳೂರು- ಧಾರವಾಡ ವಂದೇ ಭಾರತ್ ರೈಲಿಗೆ (Vande Bharat Express Train) ಇಂದು ಚಾಲನೆ ಸಿಗಲಿದೆ.
ಈ ರೈಲು ಇಂದಿನಿಂದ ಧಾರವಾಡ-ಬೆಂಗಳೂರು (Dharwad – Bengaluru) ನಡುವೆ ಸಂಚಾರ ಆರಂಭಿಸಲಿದೆ. ಇಂದು ಬೆಳಗ್ಗೆ 9 ಗಂಟೆಗೆ ವರ್ಚುವಲ್ ಆಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ
ಅಲ್ಲದೇ, ಧಾರವಾಡ ರೈಲ್ವೆ ನಿಲ್ದಾಣದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಲಿದ್ದಾರೆ. ವರ್ಚುವಲ್ ಮೂಲಕ ಪ್ರಧಾನಿ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಲಿದ್ದಾರೆ. ಇಂದು ದೇಶಾದ್ಯಂತ ಒಟ್ಟು 5 ವಂದೇ ಭಾರತ್ ರೈಲುಗಳು ಸಂಚಾರ ಮಾಡಲಿವೆ. ಮಧ್ಯಪ್ರದೇಶದಲ್ಲಿ 2 ರೈಲುಗಳು, ಕರ್ನಾಟಕ, ಬಿಹಾರ, ಹಾಗೂ ಗೋವಾದಲ್ಲಿ ಒಂದೊಂದು ರೈಲಿಗೆ ಚಾಲನೆ ಸಿಗಲಿದೆ. ಈ ಮೂಲಕ ರೈಲುಗಳ ಸಂಖ್ಯೆ 24ಕ್ಕೆ ಏರಲಿದೆ. ಕರ್ನಾಟಕಕ್ಕೆ ಇದು 2ನೇ ವಂದೇ ಭಾರತ್ ರೈಲಾಗಿದೆ. ಬೆಂಗಳೂರು- ಧಾರವಾಡ ನಡುವಿನ ಸುಮಾರು 490 ಕಿ.ಮೀ ದೂರವನ್ನು 6 ಗಂಟೆ 13 ನಿಮಿಷಗಳಲ್ಲಿ ಈ ರೈಲು ಕ್ರಮಿಸಲಿದೆ.
ಪ್ರತಿ ದಿನ ಇದು ಸಂಚಾರ ನಡೆಸಲಿದೆ. ಬೆಳಗ್ಗೆ 5:45ಕ್ಕೆ ಬೆಂಗಳೂರಿನಿಂದ ಹೊರಡುತ್ತದೆ. ಧಾರವಾಡಕ್ಕೆ 12:10ಕ್ಕೆ ಆಗಮಿಸಿ ಬಳಿಕ ಧಾರವಾಡದಿಂದ 1:15ಕ್ಕೆ ಮರಳಿ ತೆರಳಲಿದೆ.







