ರಾಮನಗರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಿಫ್ಟ್ ಕಾರ್ಡ್ ನೀಡಿ ನನ್ನನ್ನು ಸೋಲಿಸದರು ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.
ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ನಾಮಪತ್ರ ಸಲ್ಲಿಕೆ ಮಾಡಿದ ಮಾಡಿದ ನಂತರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾದೆ. ನನ್ನ ಸೋಲಿಗೆ ಜನರೇ ಉತ್ತರ ನೀಡಬೇಕು ಎಂದು ಕಣ್ಣೀರು ಸುರಿಸಿದ್ದಾರೆ. ನಮ್ಮ ತಂದೆಯ ಹೆಸರಿನಲ್ಲಿ ಸಾಕಷ್ಟು ಜನರು ಶಾಸಕರಾಗಿದ್ದಾರೆ. ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಯಾಕೆ ಸೋತರು ಎಂದು ಸಾಕಷ್ಟು ಜನ ಪ್ರಶ್ನೆ ಮಾಡ್ತಾರೆ. ನನಗೆ 76,000 ಜನ ಆಶೀರ್ವಾದ ಮಾಡಿದ್ದೀರಿ ಎಂದು ಹೇಳಿದ್ದಾರೆ.
ಕುಮಾರಣ್ಣ ಎರಡು ಬಾರಿ ಸಿಎಂ ಆಗಲು ರಾಮನಗರ ಜನತೆ ಕಾರಣ. ಕುಮಾರಣ್ಣ ನಿಮ್ಮ ಮನೆ ಮಗ. ಈ ಜಿಲ್ಲೆಯ ಜನ ನಮ್ಮ ಕುಟುಂಬಕ್ಕೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದೀರಿ. ಕೊನೆ ಉಸಿರು ಇರುವ ತನಕ ನಿಮ್ಮನ್ನು ಮರೆಯುವುದಿಲ್ಲ. ನನ್ನನ್ನು ಸ್ಪರ್ಧಿಸುವಂತೆ ಜನ ಒತ್ತಾಯ ಮಾಡಿದ್ದರು. ನಮ್ಮ ಪಕ್ಷವನ್ನು ಉಳಿಸಿ, ಕಟ್ಟಿ ಬೆಳೆಸಲು ನಾನು ಸ್ಪರ್ಧೆಯಿಂದ ದೂರ ಉಳಿದೆ. ನಾನು ಪಕ್ಷಕ್ಕಾಗಿ ಕಾರ್ಯಕರ್ತನ ರೀತಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.