ಬೆಂಗಳೂರು: ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಕಿಡ್ನಾಪ್ ಪ್ರಕರಣದಲ್ಲಿ ಈಗಾಗಲೇ ಎಚ್.ಡಿ. ರೇವಣ್ಣ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣಗೂ ಸಂಕಷ್ಟ ಎದುರಾಗಿದೆ. ಸಂತ್ರಸ್ತೆಯ ಮಗ ಕೊಟ್ಟ ದೂರಿನಲ್ಲಿ ಭವಾನಿ ಹೆಸರು ಉಲ್ಲೇಖವಾಗಿದ್ದು, ಎಫ್‍ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದರೂ ಭವಾನಿ ರೇವಣ್ಣ ಹಾಜರಾಗಿಲ್ಲ. ಹೀಗಾಗಿ ಬಂಧನದ ಭೀತಿ ಎದುರಾಗಿದೆ.
ಹೀಗಾಗಿ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದಾರೆ. ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಎಸ್‍ಐಟಿ ಆಕ್ಷೇಪಣಾ ಅರ್ಜಿ ಸಲ್ಲಿಸಲು ಕಾಲಾವಕಾಶ ಕೇಳಿದೆ. ಭವಾನಿ ಅವರಿಗೆ ಮೂರು ನೋಟಿಸ್ ನೀಡಲಾಗಿದೆ. ಇದೂವರೆಗೂ ವಿಚಾರಣೆಗೆ ಹಾಜರಾಗಿಲ್ಲ ಎಂದು ಎಸ್‍ಪಿಪಿ ಜಗದೀಶ್ ವಾಡ ಮಂಡಿಸಿದರು.
ಭವಾನಿ ಈ ಪ್ರಕರಣದ ಆರೋಪಿ ಅಂತ ಎಫ್‍ಐಆರ್ ನಲ್ಲಿ ಇದೆಯಾ ಎಂದು ಜಡ್ಜ್ ಪ್ರಶ್ನಿಸಿದರು. ಇಲ್ಲಿಯವರೆಗೆ ಎಪ್ ಐಆರ್ ನಲ್ಲಿ ಇಲ್ಲ. ಆದರೆ, ದಿನದಿಂದ ದಿನಕ್ಕೆ ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಂದೇಶ್ ಚೌಟ ಭವಾನಿ ಪರ ವಾದಿಸಿದರು. ಎಸ್‍ಐಟಿ ಆಕ್ಷೇಪಣೆಗೆ ಕೋರಿದ ಕಾರಣ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.