ಪಾಕ್ – ಸೌದಿ ನಡುವಿನ ಸಂಬಂಧಕ್ಕೆ ದೊಡ್ಡ ಹೊಡೆತ : ಪಾಕ್ ಸೇನಾ ಮುಖ್ಯಸ್ಥನ ಭೇಟಿಗೆ ಸೌದಿ ಪ್ರಿನ್ಸ್ ನಿರಾಕರಣೆ
ರಿಯಾದ್, ಅಗಸ್ಟ್20: ಪಾಕಿಸ್ತಾನ ಸೌದಿ ಅರೇಬಿಯಾ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಸೌದಿ ಅರೇಬಿಯಾ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಮತ್ತು ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ.
ಜನರೇಜ್ ಬಜ್ವಾ ಮತ್ತು ಐಎಸ್ಐ ಮುಖ್ಯಸ್ಥ ಹಮೀದ್ ಸೋಮವಾರ ಸೌದಿ ಅರೇಬಿಯಾಕ್ಕೆ ಆಗಮಿಸಿದ್ದರು. ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಕಾರಣ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಸೌದಿಗೆ ಎಚ್ಚರಿಕೆ ಕೊಟ್ಟ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧವು ಹದಗೆಟ್ಟಿತು .
ಪಾಕಿಸ್ತಾನವು ಇಸ್ಲಾಮಿಕ್ ಸಹಕಾರ ಸಂಘಟನೆ (ಐಒಸಿ) ನಾಯಕತ್ವ ವಹಿಸಿರುವ ಸೌದಿಗೆ, ಕಾಶ್ಮೀರ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಲು ಕರೆ ನೀಡಿತ್ತು. ಅವರು ಆ ಪಾತ್ರವನ್ನು ನಿರ್ವಹಿಸಲು ಸಿದ್ಧರಿಲ್ಲದಿದ್ದರೆ, ನಾನು ಪ್ರಧಾನಿ ಇಮ್ರಾನ್ ಖಾನ್ ಅವರ ಬಳಿ ಕಾಶ್ಮೀರ ವಿಚಾರದಲ್ಲಿ ನಮಗೆ ಬೆಂಬಲ ನೀಡುವ ಇಸ್ಲಾಂ ರಾಷ್ಟ್ರಗಳ ಸಭೆ ಕರೆಯುವಂತೆ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದರು. ಇದರಿಂದ ಗರಂ ಆದ ಸೌದಿ ಪಾಕಿಸ್ತಾನದ ಸಾಲ ಮತ್ತು ರಫ್ತು ಒಪ್ಪಂದವನ್ನೇ ರದ್ದುಗೊಳಿಸಿತ್ತು.
ಇದರಿಂದ ಕಂಗಾಲಾದ ಪಾಕಿಸ್ತಾನ ತನ್ನ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ಮತ್ತು ಐಎಸ್ಐ ಮುಖ್ಯಸ್ಥ ಹಮೀದ್ ಅವರನ್ನು ಸಂಧಾನಕ್ಕೆ ರಿಯಾದ್ಗೆ ಕಳುಹಿಸಿತು. ಆದರೆ ಸೌದಿಯ ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ಭೇಟಿಗೆ ನಿರಾಕರಿಸಿದ್ದು, ಕೊನೆಗೆ ಬೇರೆ ದಾರಿ ಕಾಣದೆ ರಾಜಕುಮಾರನ ಕಿರಿಯ ಸಹೋದರನೂ ಆಗಿರುವ ಉಪರಕ್ಷಣ ಸಚಿವ ಶೇಖ್ ಖಲೀದ್ ಬಿನ್ ಸಲ್ಮಾನ್ ಮತ್ತು ಸೌದಿ ಸೇನೆಯ ಮೇಜರ್ ಜನರಲ್ ಫಾಯದ್ ಅಲ್ ರುವಾಯಿಲಿ ಜೊತೆಗೆ ಕೆಲವು ನಿಮಿಷಗಳ ಮಾತುಕತೆ ನಡೆಸಿ ಪಾಕ್ ಪರವಾಗಿ ಕ್ಷಮೆ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪಾಕ್, ಸೌದಿ ಅರೇಬಿಯಾದ 6.2 ಬಿಲಿಯನ್ ಡಾಲರ್ ಪ್ಯಾಕೇಜ್ ಸೇರಿದಂತೆ ಸಾಕಷ್ಟು ಸಾಲಗಳನ್ನು ಬಾಕಿ ಉಳಿಸಿಕೊಂಡಿದ್ದು, ಅವುಗಳನ್ನು ಹಂತಹಂತವಾಗಿ ಮರಳಿಸಬೇಕೆನ್ನುವ ಒತ್ತಡಕ್ಕೂ ಸಿಲುಕಿದೆ.
ವಿಶೇಷವೆಂದರೆ, ಜನರಲ್ ಬಾಜ್ವಾ ಸೌದಿ ಅರೇಬಿಯಾದಲ್ಲಿದ್ದಾಗ ಅದೇ ಸಮಯದಲ್ಲಿ ಖುರೇಷಿ ಸೌದಿ ಅರೇಬಿಯಾದ ಪ್ರತಿಸ್ಪರ್ಧಿ ಕತಾರ್ ರಾಯಭಾರಿಯೊಂದಿಗೆ ಸಭೆ ನಡೆಸಿದರು.
ಪಾಕಿಸ್ತಾನ ಟೆಲಿವಿಷನ್ನಲ್ಲಿ ಟರ್ಕಿಯ ಟಿವಿ ಸರಣಿ ಎರ್ಟುಗ್ರುಲ್ ಅನ್ನು ಪ್ರದರ್ಶಿಸುವುದು ಸೇರಿದಂತೆ ಪಾಕಿಸ್ತಾನ ಮತ್ತು ಟರ್ಕಿ ನಡುವಿನ ಯಾವುದೇ ಸಹಕಾರವು ರಿಯಾದ್ಗೆ ಸ್ವೀಕಾರಾರ್ಹವಲ್ಲ ಎಂದು ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ತಿಳಿಸಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ, ಟರ್ಕಿ, ಮಲೇಷ್ಯಾ ಮತ್ತು ಇರಾನ್ಗಳನ್ನು ಒಳಗೊಂಡ ಒಂದು ಬಣವನ್ನು ರಚಿಸುವ ಯಾವುದೇ ಮಾತುಕತೆಗಳನ್ನು ಇಸ್ಲಾಮಾಬಾದ್ ಖಂಡಿಸಬೇಕು ಎಂದು ಸೌದಿ ಅರೇಬಿಯಾ ಹೇಳಿದೆ.