ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರದ ವಿಚಾರ ಇದೀಗ ಜ್ವಾಲಾಮುಖಿಯಂತೆ ಸ್ಫೋಟಗೊಂಡಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಮುಂದಿನ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ತಮಗೆ ಬಿಟ್ಟು ಕೊಡಲೇಬೇಕು. ಇಲ್ಲವಾದರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರ ಮುಂದೆಯೇ ಪಟ್ಟು ಹಿಡಿದಿರುವುದು ದೆಹಲಿ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಡಿಕೆಶಿ ಅವರ ಈ ದಿಟ್ಟ ನಡೆ ಇದೀಗ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಒಪ್ಪಂದದಂತೆ ನಡೆದುಕೊಳ್ಳಿ ಎಂಬ ಖಡಕ್ ಎಚ್ಚರಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಬಿಟ್ಟುಕೊಡಲು ಸುತಾರಾಂ ಸಿದ್ಧರಿಲ್ಲದ ಕಾರಣ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದೆ. ಪಕ್ಷದ ವರಿಷ್ಠರು 2023ರ ಜುಲೈನಲ್ಲಿ ದೆಹಲಿಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಎರಡೂವರೆ ವರ್ಷದವರೆಗೂ ಮಾತ್ರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಲಿ, ಸಂಸತ್ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಉಪಮುಖ್ಯಮಂತ್ರಿ ಹುದ್ದೆ ಎರಡನ್ನೂ ನಿಭಾಯಿಸುವಂತೆ ಹೈಕಮಾಂಡ್ ಅಂದು ಆದೇಶಿಸಿತ್ತು. ಅದರಂತೆ ತಾವು ನಡೆದುಕೊಂಡಿದ್ದು, ಪಕ್ಷ ನೀಡಿದ ಜವಾಬ್ದಾರಿಗಳು ಹಾಗೂ ಆದೇಶಗಳನ್ನು ತಾವು ಚಾಚೂ ತಪ್ಪದೇ ಪಾಲಿಸಿದ್ದೇನೆ. ಈಗ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು ಎಂದು ಡಿಕೆಶಿ ಅಂತಿಮ ಗಡುವು ನೀಡಿದ್ದಾರೆ.
ನಿಷ್ಠೆಯನ್ನು ಕಡೆಗಣಿಸಿದರೆ ಪರಿಣಾಮ ನೆಟ್ಟಗಿರಲ್ಲ
ಈ ಹಿಂದೆ ಕೇಂದ್ರ ಸರ್ಕಾರ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಐಟಿ ಸಂಸ್ಥೆಗಳನ್ನು ಬಳಸಿಕೊಂಡು ಸೇಡಿನ ರಾಜಕೀಯ ಮಾಡಿ ನನ್ನನ್ನು ಜೈಲಿಗೆ ಕಳುಹಿಸಿದಾಗಲೂ ನಾನು ಅಂಜದೆ, ಅಳುಕದೆ ಪಕ್ಷಕ್ಕಾಗಿ ಬಂಡೆಯಂತೆ ನಿಂತಿದ್ದೆ ಎನ್ನುವುದನ್ನು ಡಿಕೆಶಿ ಹೈಕಮಾಂಡ್ ಗೆ ನೆನಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಹಗಲು ರಾತ್ರಿ ಎನ್ನದೆ ರಾಜ್ಯ ಸುತ್ತಿ ಪಕ್ಷಕ್ಕೆ 140 ಸೀಟುಗಳ ಸ್ಪಷ್ಟ ಬಹುಮತ ತಂದು ಕೊಡಲು ಕಷ್ಟ ಪಟ್ಟಿದ್ದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೈಕಮಾಂಡ್ ಮಾತಿಗೆ ಕಟ್ಟು ಬಿದ್ದು ಆರಂಭದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿದ್ದೇನೆ. ಈ ಕ್ಷಣದವರೆಗೂ ಯಾವುದೇ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಸಂಪೂರ್ಣವಾಗಿ ಹೈಕಮಾಂಡ್ ಮೇಲೆ ವಿಶ್ವಾಸ ಇಟ್ಟಿದ್ದೇನೆ. ಆದರೆ ನನ್ನ ನಿಷ್ಠೆಯನ್ನು ಕಡೆಗಣಿಸಿದರೆ, ಪಕ್ಷಕ್ಕೆ ಭಾರಿ ಹಾನಿಯಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ರಹಸ್ಯ ಮತದಾನದ ದಾಳ ಮತ್ತು ದೆಹಲಿ ದಂಡಯಾತ್ರೆ
ದೆಹಲಿಯಲ್ಲಿ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಡಿ.ಕೆ.ಶಿವಕುಮಾರ್ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ರಹಸ್ಯ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಡಿಕೆಶಿ ಪರವಾಗಿ ಈಗಾಗಲೇ ಒಂದಷ್ಟು ಶಾಸಕರು ಧ್ವನಿಯತ್ತಿ, ದೆಹಲಿ ಯಾತ್ರೆ ನಡೆಸುತ್ತಿದ್ದಾರೆ. ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು, ಅಲ್ಲಿ ನಾಯಕತ್ವದ ಬಗ್ಗೆ ಶಾಸಕರ ಅಭಿಪ್ರಾಯ ಕ್ರೋಢಿಕರಣಕ್ಕೆ ರಹಸ್ಯ ಮತದಾನ ನಡೆಸಬೇಕು ಎಂದು ಡಿಕೆ ಶಿವಕುಮಾರ್ ಬಣ ಪ್ರಬಲ ದಾಳ ಉರುಳಿಸಿದೆ.
ಸಿದ್ದರಾಮಯ್ಯ ಬಣದ ಪ್ರತಿತಂತ್ರವೇನು?
ಒಂದು ವೇಳೆ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ರಾಜೀನಾಮೆ ನೀಡುವಂತೆ ಒತ್ತಡ ಹೇರಿದರೆ ಮುಂದೆ ಅನುಸರಿಸಬೇಕಾದ ರಣತಂತ್ರಗಳ ಬಗ್ಗೆ ಸಿದ್ದರಾಮಯ್ಯ ಬಣದ ಪ್ರಮುಖರು ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ, ಶೋಷಿತ, ಹಿಂದುಳಿದ ವರ್ಗಗಳು (ಅಹಿಂದ) ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಬಹುದು ಎಂಬ ಆತಂಕವನ್ನು ಸೃಷ್ಟಿಸಲಾಗಿದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಅಧಿಕೃತವಾದ ಬಂಡಾಯ ಸಾರಲು ಮಾಜಿ ಸಚಿವ ಕೆ.ಎನ್.ರಾಜಣ್ಣ, ಸಚಿವ ಸತೀಶ್ ಜಾರಕಿಹೊಳಿ, ಬಸವರಾಜ್ ರಾಯರೆಡ್ಡಿ ಸೇರಿದಂತೆ ಹಲವಾರು ಮಂದಿ ತೆರೆಮರೆಯ ಕಾರ್ಯತಂತ್ರ ನಡೆಸುತ್ತಿದ್ದಾರೆ. ಅಹಿಂದ ಸಮಾವೇಶಗಳ ನೆಪದಲ್ಲಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕೂ ವೇದಿಕೆ ಸಜ್ಜುಗೊಳ್ಳುತ್ತಿದೆ.
ರಾಜಿ ಸೂತ್ರಕ್ಕೆ ಒಪ್ಪದ ಡಿಕೆಶಿ
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರನ್ನು ಸಚಿವರನ್ನಾಗಿ ಮಾಡುವುದು ಹಾಗೂ ಸ್ವತಃ ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಭರವಸೆಗಳನ್ನು ಹೈಕಮಾಂಡ್ ನಾಯಕರು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ಸ್ಥಾನ ಬಿಟ್ಟು ಬೇರೆ ಯಾವುದೇ ಸಂಧಾನಕ್ಕೂ ಡಿಕೆಶಿ ಒಪ್ಪುತ್ತಿಲ್ಲ. 2028ರ ವೇಳೆಗೆ ನಿಮ್ಮನ್ನೇ ಸಿಎಂ ಮಾಡುತ್ತೇವೆ ಎಂಬ ವರಿಷ್ಠರ ಮಾತನ್ನು ಡಿಕೆಶಿ ತಿರಸ್ಕರಿಸಿದ್ದು, ರಾಜಕೀಯ ಯಾವ ದಿಕ್ಕಿನೆಡೆಗೆ ಹೋಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಈಗಲೇ ತೀರ್ಮಾನ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಒಟ್ಟಾರೆಯಾಗಿ, ಹೈಕಮಾಂಡ್ ಅಂಗಳದಲ್ಲಿ ಡಿಕೆಶಿ ಸಿಡಿಸಿರುವ ಈ ಬಾಂಬ್, ರಾಜ್ಯ ಕಾಂಗ್ರೆಸ್ ನಲ್ಲಿ ಮಹಾಸ್ಫೋಟ ಉಂಟುಮಾಡುವ ಲಕ್ಷಣಗಳು ದಟ್ಟವಾಗಿವೆ. ಒಂದು ವೇಳೆ ಸಿದ್ದರಾಮಯ್ಯ ಹೈಕಮಾಂಡ್ ಮಾತಿಗೆ ಮನ್ನಣೆ ನೀಡಿ ಅಧಿಕಾರ ಬಿಟ್ಟು ಕೊಟ್ಟರೆ ಎಲ್ಲವೂ ಸುಖಾಂತ್ಯವಾಗಲಿದೆ. ಇಲ್ಲವಾದರೆ ರಾಜಕಾರಣ ನಿಜವಾಗಲೂ ಕ್ರಾಂತಿಯ ಸ್ವರೂಪಕ್ಕೆ ತಿರುಗಲಿದೆ.








