ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ಈಗ ರೈತರಿಗೂ ತಟ್ಟಿದೆ. ಮೊದಲೇ ಬರಗಾಲದಿಂದ ತತ್ತರಿಸಿರುವ ರೈತರಿಗೆ ಈಗ ಬಿತ್ತನೆ ಬೀಜದ ಬೆಲೆ ಏರಿಕೆ ಸಂಕಷ್ಟ ತಂದಿದೆ.
ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ ದರ ವ್ಯತ್ಯಾಸ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.48.50ರಷ್ಟು ಹೆಚ್ಚಳವಾಗಿದೆ. ಹೀಗಾಗಿ ಬಿತ್ತನೆ ಬೀಜದ ದರ ಕೇಳಿ ರೈತರು ಕಂಗಾಲಾಗಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಆದರೆ, ಇನ್ನೊಂದು ಸಮಾಧಾನವೆಂದರೆ ಪಕ್ಕದ ರಾಜ್ಯಗಳಲ್ಲಿನ ಬೆಲೆಗಿಂತ ರಾಜ್ಯದಲ್ಲಿ ಕಡಿಮೆ ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವರು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆಹಾರ ಧಾನ್ಯಗಳ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಆದರೆ, ಬಿತ್ತನೆ ಬೀಜಗಳ ದರಗಳನ್ನು ಜಾಸ್ತಿ ಮಾಡಲಾಗಿದೆ. ಹೆಸರು 805 ರೂ, ಉದ್ದು 660, ತೊಗರಿ 776, ಸೋಯಾಬಿನ್ 1,431 ರೂ. ಇದ್ದು, ಕಳೆದ ವರ್ಷಕ್ಕಿಂತ ಶೇ. 20 ರಿಂದ 30ರಷ್ಟು ಹೆಚ್ಚಳವಾಗಿದೆ. ಹೀಗಾಗಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.