ರಾಜ್ಯ ಸರ್ಕಾರ ಜೂನ್ 16ರಿಂದ ಓಲಾ, ಊಬರ್, ರಾಪಿಡೋ ಮುಂತಾದ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿಗಳ ಮೇಲೆ ನಿಷೇಧ ಹೇರಿರುವುದರಿಂದ ರಾಜ್ಯದಾದ್ಯಂತ ಸಾವಿರಾರು ಬೈಕ್ ಟ್ಯಾಕ್ಸಿ ಚಾಲಕರ ಭವಿಷ್ಯ ಅತಂತ್ರವಾಗಿದೆ. ಈ ಹಿನ್ನೆಲೆಯಲ್ಲಿ, ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದ ರಾಹುಲ್ ಗಾಂಧಿಗೆ ಪತ್ರ ಬರೆದು ನಿಷೇಧವನ್ನು ಹಿಂಪಡುವಂತೆ ಮನವಿ ಮಾಡಿದೆ.
ಪತ್ರದಲ್ಲಿ ಅವರು ಉಲ್ಲೇಖಿಸಿರುವಂತೆ, ರಾಜ್ಯದಾದ್ಯಂತ ಸುಮಾರು 1 ಲಕ್ಷಕ್ಕೂ ಹೆಚ್ಚು ಯುವಕರು ಬೈಕ್ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಉದ್ಯೋಗಗಳು ಕಡಿಮೆ, ಸರ್ಕಾರಿ ಉದ್ಯೋಗಗಳ ಕೊರತೆ ಮತ್ತು ದಿನನಿತ್ಯದ ಹಣದ ಅಗತ್ಯತೆಯ ನಡುವೆ, ಈ ಪ್ಲಾಟ್‌ಫಾರ್ಮ್‌ಗಳ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಿಷೇಧ ಹೇರುವುದು ಅವರ ನಿತ್ಯ ಬದುಕಿಗೆ ಮಾರಕವಾಗಿದೆ ಎಂದು ಅಸೋಸಿಯೇಷನ್ ಅಭಿಪ್ರಾಯಪಟ್ಟಿದೆ.
ಮೂರನೇ ತರಗತಿ ವಿದ್ಯಾಭ್ಯಾಸವಿದ್ದವರಿಂದ ಹಿಡಿದು ಪದವೀಧರರ ತನಕದವರು ಬೈಕ್ ಟ್ಯಾಕ್ಸಿ ಮೂಲಕ ತಮ್ಮ ಕುಟುಂಬ ಪೋಷಿಸುತ್ತಿದ್ದಾರೆ. ಈ ಸೇವೆಯನ್ನು ನಿಷೇಧಿಸಿದರೆ, ಬೇರೇನಾದರೂ ಪರ್ಯಾಯ ವ್ಯವಸ್ಥೆ ಸರ್ಕಾರ ಒದಗಿಸಬೇಕು, ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಸಾಮಾನ್ಯ ಕಾರು ಟ್ಯಾಕ್ಸಿಗೆ ಹೋಲಿಸಿದರೆ ಬೈಕ್ ಟ್ಯಾಕ್ಸಿ ಆರ್ಥಿಕವಾಗಿ ಕಡಿಮೆ ದರದಲ್ಲಿ, ವೇಗವಾಗಿ ಸಂಚಾರಕ್ಕೆ ಅನುಕೂಲವಿರುವುದರಿಂದ ಹಲವಾರು ಜನರಿಗೆ ಇದೊಂದು ಮಹತ್ವದ ಸಂಚಾರ ಆಯ್ಕೆಯಾಗಿದೆ. ಜೊತೆಗೆ, ಉದ್ಯೋಗ ಸೃಷ್ಟಿಯಲ್ಲಿಯೂ ಇದರ ಪಾತ್ರವಿದೆ.
ಪತ್ರದಲ್ಲಿ, ಇದೇ ಸೇವೆಯನ್ನು ಹಲವಾರು ರಾಜ್ಯಗಳು ಮಾನ್ಯತೆ ನೀಡಿ ಕಾನೂನುಬದ್ಧವಾಗಿ ಅನುಮತಿಸುತ್ತಿವೆ. ಕರ್ನಾಟಕದಲ್ಲಿ ಮಾತ್ರ ನಿಷೇಧಿಸುವುದು ಅನ್ಯಾಯ ಎಂಬ ಕಾರಣವನ್ನೂ ನೀಡಲಾಗಿದೆ.
ಈ ನಡುವೆ, ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, #SaveBikeTaxi ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗತೊಡಗಿದೆ. ಸರ್ಕಾರ ಈ ಕುರಿತು ಯಾವ ನಿಲುವು ಇಡುತ್ತದೆ ಎಂಬ ನಿರೀಕ್ಷೆಯೊಂದಿಗೆ ಚಾಲಕರು ಹಾಗೂ ಸಾರ್ವಜನಿಕರು ಕಾದು ಕುಳಿತಿದ್ದಾರೆ.