ಬೆಂಗಳೂರು: ಬಿಟ್ ಕಾಯಿನ್ ಹಗರಣ (Bitcoin Scam) ದ ಪ್ರಕರಣದಲ್ಲಿ ಎಸ್ ಐಟಿ ಅಧಿಕಾರಿಗಳು ಶ್ರೀಕಿ (Sriki) ಅಲಿಯಾಸ್ ಶ್ರೀಕೃಷ್ಣನನ್ನು ಬಂಧಿಸಿದ್ದಾರೆ.
2017ರಲ್ಲಿ ತುಮಕೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುನೋ ಕಾಯಿನ್ ಕಳವು ಪ್ರಕರಣದಲ್ಲಿಯೇ ಸಿಐಡಿ ವಿಶೇಷ ತನಿಖಾಧಿಕಾರಿಗಳು ಶ್ರೀಕಿಯನ್ನು ಬಂಧಿಸಿದ್ದಾರೆ. 2015ರಲ್ಲಿ ಶ್ರೀಕಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿದ್ದ. ತನಿಖೆ ಸಂದರ್ಭದಲ್ಲಿ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು. 2020ರಲ್ಲಿ ಸುಮಾರು 1000 ಕೋಟಿ ಹಗರಣದ ಬಿಟ್‌ಕಾಯಿನ್ ಕೇಸ್‌ನಲ್ಲಿ ಶ್ರೀಕಿ ಬಂಧನವಾಗಿತ್ತು. ಈತ ಕಳೆದ ಕೆಲವು ವರ್ಷಗಳಿಂದ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್ ಫಾರ್ಮ್ ಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್ ಕಾಯಿನ್‌ಗಳನ್ನು ಎಗರಿಸಿದ್ದ ಎನ್ನಲಾಗಿದೆ. ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಜಾಲತಾಣ ಕೂಡ ಈತ ಹ್ಯಾಕ್ ಮಾಡಿದ್ದ ಎನ್ನಲಾಗಿದೆ.
ಈತ ಇತ್ತೀಚೆಗೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಸಿಸಿಬಿ ಪೊಲೀಸರ ವಿರುದ್ಧ ಕೂಡ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಆದರೆ, ಶ್ರೀಕಿ ಸಿಐಡಿ ತನಿಖೆಗೆ ಹಾಜರಾಗದೆ ಸತಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಆತನನ್ನೇ ಬಂಧಿಸಿದ್ದಾರೆ.