ಬಿಜೆಪಿ ಸರಕಾರ ಭಸ್ಮವಾಗಲಿದೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ರಾಜ್ಯದ ದೇವಾಲಯಗಳು ಜನರ ಆಸ್ತಿ. ಬಿಜೆಪಿ ಸರ್ಕಾರ ಈ ಆಸ್ತಿಯನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ ಹಸ್ತಾಂತರ ಮಾಡಲು ಮುಂದಾಗಿದೆ. ಇದು ಹಿಂದೂ ವಿರೋಧಿ ನೀತಿಯಾಗಿದ್ದು, ರಾಜ್ಯದ ಜನ ಹಾಗೂ ಆ ದೇವರು ಬಿಜೆಪಿಯನ್ನು ಕ್ಷಮಿಸುವುದಿಲ್ಲ. ಈ ನಿರ್ಧಾರದಿಂದ ಬಿಜೆಪಿ ಸರ್ಕಾರ ಸುಟ್ಟು ಭಸ್ಮವಾಗಲಿದೆ. ಕಾಂಗ್ರೆಸ್ ಹಿಂದೂ ವಿರೋಧಿಯಲ್ಲ, ಬಿಜೆಪಿ ನಿಜವಾದ ಹಿಂದೂ ವಿರೋಧಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಂಪರೆಯನ್ನು ಬುಡಮೇಲು ಮಾಡಲು ಸರಕಾರ ಹೊರಟಿದೆ. ಒಂದೆರಡು ದೇವಾಲಯಗಳು, ಮಠಗಳನ್ನು ಬಿಟ್ಟರೆ ಉಳಿದೆಲ್ಲವೂ ಸರ್ಕಾರದ ನಿಯಂತ್ರಣದಲ್ಲಿದೆ. ಎಲ್ಲ ದೇವಾಲಯಗಳಲ್ಲಿ ಜನರು ಕೋಟ್ಯತರ ರೂಪಾಯಿಯನ್ನು ಹುಂಡಿಗೆ ಹಾಕುತ್ತಾರೆ. ದೇವಾಲಯ ಇವತ್ತಿನದ್ದಲ್ಲ, ನೂರಾರು ವರ್ಷಗಳ ಆಸ್ತಿ. ಇದನ್ನು ತಮ್ಮ ಕಾರ್ಯಕರ್ತರಿಗೆ ಹಂಚಲು ಬಿಜೆಪಿ ಸರಕಾರ ಹೊರಟಿದೆ ಎಂದು ಆರೋಪಿಸಿದ್ದಾರೆ.
ನಾವು ಕೂಡ ಹಿಂದೂಗಳು. ಹಿಂದೂ ಧರ್ಮ ಹಾಗೂ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿರುವವರು. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನಪರವಾದ ಒಂದೇ ಒಂದು ಯೋಜನೆಯನ್ನು ನೀಡಲಿಲ್ಲ. ನಮ್ಮ ಸರ್ಕಾರ ಕೊಟ್ಟ ಕಾರ್ಯಕ್ರಮಗಳು ಹಾಗೂ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ನಾವು ಅದಕ್ಕೆ ಸಿದ್ಧ. ಈಗ ಚುನಾವಣೆಯಲ್ಲಿ ಸೋಲುತ್ತಿದ್ದೇವೆ ಎಂಬ ಕಾರಣಕ್ಕೆ ಇವರು ಗೋಹತ್ಯೆ, ಮತಾಂತರ ನಿಷೇಧ, ದೇವಾಲಯಗಳ ಸ್ವಾಯತ್ತತೆ ಕಾನೂನು ತರುತ್ತಿದ್ದಾರೆ. ಚುನಾವಣೆ ಸೋಲನ್ನು ಮರೆಮಾಚಲು, ಜನರನ್ನು ಭಾವನಾತ್ಮಕವಾಗಿ ಹಿಡಿದಿಡಲು ಪ್ರಯತ್ನಿಸುತ್ತಿದ್ದು, ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಈ ರೀತಿ ಮಾಡಿದರೆ ಜನ ಮತ ಹಾಕುತ್ತಾರೆ ಎಂಬ ಭ್ರಮೆಯಿಂದ ಮುಖ್ಯಮಂತ್ರಿಗಳು ಹೊರಬರಬೇಕು. ದೇವಾಲಯಗಳಲ್ಲಿ ಈಗ ನಡೆದುಕೊಂಡು ಹೋಗುತ್ತಿರುವ ಆಚರಣೆಯನ್ನು ಮುಂದುವರಿಸಬೇಕು. ಇಲ್ಲದಿದ್ದರೆ ನಿಮ್ಮ ಪಕ್ಷ, ಸರಕಾರ ಸುಟ್ಟು ಹೋಗುತ್ತದೆ. ನಾವು ಹಿಂದೂ ವಿರೋಧಿಗಳಲ್ಲ, ನೀವು ನಿಜವಾದ ಹಿಂದೂ ವಿರೋಧಿಗಳು. ದೇವಾಲಯ ನಿಮ್ಮ ಆಸ್ತಿಯಲ್ಲ, ರಾಜ್ಯದ ಜನರ ಆಸ್ತಿ.
ದೇವರು, ದೇವಾಲಯಗಳನ್ನೇ ಮಾರಲು ಹೋರಟಿರುವ ನೀವು ಎಂತಹ ಕ್ರೂರ ಕೃತ್ಯಕ್ಕೆ ಕೈ ಹಾಕಿದ್ದೀರಿ. ಮುಂದಿನ ತಿಂಗಳು 4 ರಂದು ನಾವು ಪಕ್ಷದ ನಾಯಕರ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿ ಒಮ್ಮತದ ನಿರ್ಧಾರಕ್ಕೆ ಬರುತ್ತೇವೆ ಎಂದು ತಿಳಿಸಿದ್ದಾರೆ.