ನನ್ನನ್ನ ಮಾತ್ರ ಟಾರ್ಗೆಟ್ ಮಾಡಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ – ಡಿಕೆಶಿ
ಬಿಜೆಪಿ ದ್ವೇಷದ ರಾಜಕಾರಣ ಮಾಡಿದೆ. ನಾವು ಪಾದಯಾತ್ರೆ ನಡೆಸಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕಿ ಕೋರ್ಟ್‍ಗೆ ಅಲೆಯುವಂತೆ ಮಾಡಿದೆ. ನನ್ನನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ ತೀವ್ರವಾಗಿದ್ದ ಸಮಯದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು ಇದೀಗ ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಿಟಿ ಸಿವಿಲ್ ಕೋರ್ಟ್ ವಾರೆಂಟ್ ಜಾರಿ ಮಾಡಿತ್ತು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಾವು ಪಾದಯಾತ್ರೆ ನಡೆಸಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕಿ ಕೋರ್ಟ್‍ಗೆ ಅಲೆಯುವಂತೆ ಮಾಡಿದೆ. ನಾವು ನಮಗೋಸ್ಕರ ಹೋರಾಟ ಮಾಡಿದ್ವಾ?. ನಾವು ರೈತ ಪರ ಹೋರಾಟ ಮಾಡಿದ್ದು. ಇದಕ್ಕೆಲ್ಲ ಜನ ಉತ್ತರ ಕೊಡಬೇಕು.
ಇವತ್ತು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಸಮನ್ಸ್ ಆಗಿತ್ತು. ಕೊರೊನಾ ವೈರಸ್ ಸಂದರ್ಭದಲ್ಲಿ ಹತ್ತು ಸಾವಿರ ಜನ ಸೇರಿಸಿದ್ದಾರೆ ಅಂತಾ ಕೇಸ್ ಹಾಕಿದ್ದಾರೆ. ಆರು ಜನರ ಮೇಲೆ ಕೇಸ್ ಇದೆ. ಉದ್ದೇಶಪೂರ್ವಕವಾಗಿ ಕೇಸ್ ಹಾಕಿದ್ದಾರೆ. ಶಿವಮೊಗ್ಗದಲ್ಲಿ ಈಶ್ವರಪ್ಪ, ರಾಘವೇಂದ್ರ ಪ್ರತಿಭಟನೆ ಮಾಡಿದ್ರು ಆಗ ಕಾನೂನು ಇರಲಿಲ್ವಾ ಕೊರೊನಾ ಇರಲಿಲ್ಲವಾ?. ಇದನ್ನು ಜನರು ನೋಡಬೇಕು ಬಿಜೆಪಿಗೆ ಉತ್ತರ ನೀಡಬೇಕು. ಕೇವಲ ದ್ವೇಷದಿಂದ ಮಾಡುತ್ತಿದ್ದಾರೆ. ರೈತರ ಪರವಾಗಿ ಹೋರಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಹೋರಾಟ ಹತ್ತಿಕ್ಕುತ್ತಿದ್ದಾರೆ. ನಾವು ಯಾವುದಕ್ಕೂ ಜಗ್ಗಲ್ಲ ಎಂದು ಡಿಕೆಶಿ ಮಾಧ್ಯಮಗಳ ಮುಂದೆ ಗುಡುಗಿದ್ದಾರೆ.