ಕರ್ನಾಟಕ ಸರ್ಕಾರದ ವಿರುದ್ಧ ಭಾರೀ ವಾಗ್ದಾಳಿ ನಡೆಸಿರುವ ಬಿಜೆಪಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೀಗ ಸರ್ಕಾರದ ಭ್ರಷ್ಟಾಚಾರವನ್ನು ಬಿಜೆಪಿಯವರು ಮಾತ್ರವಲ್ಲ, ಕಾಂಗ್ರೆಸ್ ಶಾಸಕರೇ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಎಂಎಲ್‌ಎ ರಾಜು ಕಾಗೆ ಮತ್ತು ಬಿ.ಆರ್. ಪಾಟೀಲ್ ಅವರ ಹೇಳಿಕೆಗಳು ಸಿಕ್ಕಾಪಟ್ಟೆ ಗಂಭೀರವಾಗಿವೆ. ಮನೆ ಹಂಚಿಕೆಗೆ ಹಣ ವಸೂಲಿ ಆಗ್ತಾ ಇದೆಯಂತೆ. ಇದು ಸರಕಾರದ ಪತನದ ಆರಂಭ ಎಂದಿದ್ದಾರೆ.
ಸರ್ಕಾರದಲ್ಲಿ ಮಂತ್ರಿಗಳು ರಾಜೀನಾಮೆ ಕೊಡುವುದು ಸಾಕಾಗಲ್ಲ, ಈ ಸರ್ಕಾರವೇ ಲೂಟಿಕೋರ ಸರ್ಕಾರ. ಆದ್ದರಿಂದ ಸಿಎಂ ಮತ್ತು ಡಿಸಿಎಂ ರಾಜೀನಾಮೆ ಕೊಟ್ಟು, ಜನತೆಗೆ ಹೊಸ ಭರವಸೆ ನೀಡಬೇಕು. ಇಲ್ಲದಿದ್ದರೆ ಜನರ ಕೋಪ ಇನ್ನೂ ಹೆಚ್ಚಾಗುತ್ತೆ, ಎಂದಿದ್ದಾರೆ.
ಇದೇ ವೇಳೆ ಅವರು, ಸರ್ಕಾರದಲ್ಲಿ ನೈತಿಕತೆಯು ಇಲ್ಲದಿದ್ದಾಗ ಜನಪ್ರತಿನಿಧಿಗಳೇ ಪ್ರಜ್ಞಾವಂತರಾಗಿ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಬಿಜೆಪಿ ಪ್ರಬಲ ಹೋರಾಟ ನಡೆಸಲಿದೆ, ಎಂದು ಎಚ್ಚರಿಸಿದರು.