2000 Rupee Note: 2 ಸಾವಿರ ರೂಪಾಯಿ ನೋಟು ರದ್ದಾಗುತ್ತಾ ? ರಾಜ್ಯಸಭೆಯಲ್ಲಿ ಚರ್ಚೆ… !!
2000 ರೂಪಾಯಿ ಮುಖಬೆಲೆ ನೋಟು ರದ್ದಾಗುವ ಸಾಧ್ಯತೆ ಇದೆಯಾ ? ಇತ್ತೀಚಿನ ಬೆಳವಣಿಗೆಗಳನ್ನ ಗಮನಿಸಿದರೆ ಸಾಧ್ಯತೆಗಳು ಕ್ರಮೇಣ ಹೆಚ್ಚಾಗುತ್ತಿದೆ. ನವೆಂಬರ್ 8, 2016 ರಂದು ಕೇಂದ್ರ ಸರ್ಕಾರವು ರೂ 1,000 ಮತ್ತು ರೂ 5,00 ನೋಟುಗಳನ್ನ ಅಮಾನ್ಯೀಕರಣ ಮಾಡಿ 2000 ರೂ ಮುಖಬೆಲೆಯ ಹೊಸ ನೋಟು ಚಲಾವಣೆಗೆ ತಂದಿತ್ತು.
ಆದರೆ, ಕೇಂದ್ರ ಸರ್ಕಾರ ಕಪ್ಪುಹಣಕ್ಕೆ ಕಡಿವಾಣ ಹಾಕಲು 1000 ರೂಪಾಯಿ ನೋಟು ರದ್ದು ಮಾಡಿ, 2000 ರೂಪಾಯಿ ನೋಟು ಬಿಡುಗಡೆ ಮಾಡಿರುವುದು ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದ 2 ಸಾವಿರ ರೂಪಾಯಿ ನೋಟು ಪ್ರಕಟಣೆ ಸ್ಥಗಿತಗೊಂಡಿತ್ತು. ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಂಸದರು ಇದನ್ನು ಹಂತಹಂತವಾಗಿ ಸಂಪೂರ್ಣವಾಗಿ ರದ್ದುಪಡಿಸಲು ಬಯಸುತ್ತಿದ್ದಾರೆ.
ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಮೋದಿ ಸಂಸತ್ತಿನಲ್ಲಿ ನೋಟು ರದ್ದತಿ ಕುರಿತಂತೆ ಬೇಡಿಕೆಯನ್ನ ಪ್ರಸ್ತಾಪಿಸಿದ್ದಾರೆ. ರಾಜ್ಯಸಭೆಯ ಶೂನ್ಯವೇಳೆಯಲ್ಲಿ 2000 ರೂಪಾಯಿ ನೋಟುಗಳನ್ನು ಹಂತ ಹಂತವಾಗಿ ರದ್ದುಗೊಳಿಸುವಂತೆ ಒತ್ತಾಯಿಸಿದರು.
ಸಣ್ಣ ನೋಟು ರದ್ದು ಮಾಡಿ ದೊಡ್ಡ ನೋಟುಗಳನ್ನು ಚಲಾವಣೆಯಲ್ಲಿ ಇಡುವುದು ತಪ್ಪು. ಇತರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ದೊಡ್ಡ ನೋಟುಗಳು ಚಲಾವಣೆಯಲ್ಲಿಲ್ಲ ಎಂದರು. ದೊಡ್ಡ ನೋಟುಗಳನ್ನು ಅಕ್ರಮ ಹಣ ವರ್ಗಾವಣೆ ಮತ್ತು ಮಾದಕ ವಸ್ತುಗಳಿಗೆ ಬಳಸಲಾಗುತ್ತಿದೆ ಎಂದು ಸುಶೀಲ್ ಮೋದಿ ಆರೋಪಿಸಿದ್ದಾರೆ.
ಜನರು ತಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಕೇಂದ್ರ ಸರ್ಕಾರ ಎರಡು ವರ್ಷಗಳ ಕಾಲಾವಕಾಶ ನೀಡಿದರೆ ಉತ್ತಮ ಎಂದು ಸುಶೀಲ್ ಮೋದಿ ಸಲಹೆ ನೀಡಿದ್ದಾರೆ. ಎಟಿಎಂಗಳಲ್ಲಿಯೂ 2000 ರೂಪಾಯಿ ನೋಟುಗಳು ಸಿಗುತ್ತಿಲ್ಲ ಎಂದು ಕೇಂದ್ರದ ಗಮನಕ್ಕೆ ತಂದರು. 2000 ರೂಪಾಯಿ ನೋಟುಗಳ ಬಗ್ಗೆ ಹಲವು ತಪ್ಪು ಕಲ್ಪನೆಗಳಿದ್ದು, ಕೇಂದ್ರವು ಅವುಗಳನ್ನು ಸ್ಪಷ್ಟಪಡಿಸಬೇಕು ಎಂದು ಸುಶೀಲ್ ಮೋದಿ ಹೇಳಿದ್ದಾರೆ.
ಆಡಳಿತ ಪಕ್ಷದ ಸಂಸದರು ತಂದಿರುವ ಈ ಪ್ರಸ್ತಾವನೆಗೆ ಕೇಂದ್ರದ ಮೋದಿ ಸರಕಾರ ಯಾವ ರೀತಿ ಸ್ಪಂದಿಸುತ್ತದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
Bjp Mp Demands Phase Out 2000 Rupee Notes In Rajya Sabha Sushil Modi








