ವಲಸೆ ಹಕ್ಕಿಗೆ ವಿಶ್ರಾಂತಿಗೂ ಗೂಡು ಇಲ್ಲದಂತಾಗಿದೆ : ಸಿದ್ದು ವಿರುದ್ಧ ಬಿಜೆಪಿ ಕಿಡಿ
ಬೆಂಗಳೂರು : ವಲಸೆ ಹಕ್ಕಿಗೆ ವಿಶ್ರಾಂತಿಗೂ ಗೂಡು ಇಲ್ಲದಂತಾಗಿದೆ. ನಿಮ್ಮ ಧಮ್ ಎಲ್ಲಿ ಹೋಯಿತು ಸಿದ್ದರಾಮಯ್ಯ ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.
ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಭಾಗದಲ್ಲಿ ಬಿಜೆಪಿ ಸೋಲುಂಡಿದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿಗೆ ಧಮ್ ಇಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಖಂಡಿಸಿ ಟ್ವೀಟ್ ಮಾಡಿರುವ ಬಿಜೆಪಿ, ತಮ್ಮನ್ನು ಯಾರಾದರೂ ಟೀಕಿಸಿದಾಗ ಮಾತ್ರ ಸಿದ್ದರಾಮಯ್ಯ ಅವರಿಗೆ ಸಂಸದೀಯ ನಡವಳಿಕೆ, ಸಂಸದೀಯ ಮಾತಿನ ನೆನಪಾಗುತ್ತದೆ. ಆದರೆ ತಾವು ಮಾತ್ರ ಸದಾ ಅಸಂಸದೀಯ ವರ್ತನೆ, ಅಸಂಸದೀಯ ಮಾತುಗಳನ್ನೇ ಆಯ್ದುಕೊಳ್ಳುತ್ತಾರೆ. ಸಿದ್ದರಾಮಯ್ಯನವರೇ, ಬಿಜೆಪಿಯವರಿಗೆ ಧಮ್ ಇಲ್ಲ ಅದಕ್ಕೆ ಸೋತಿದ್ದಾರೆ ಎಂಬ ಮಾತನ್ನು ತಮಗೂ ಅನ್ವಯಿಸಬಹುದಲ್ಲವೇ ಎಂದು ಕುಟುಕಿದೆ.
ಇನ್ನು ಮಾನ್ಯ ಸಿದ್ದರಾಮಯ್ಯ ಅವರೇ, ನೀವು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿರಿ. ಬಾದಾಮಿಯಲ್ಲಿ ಅಲ್ಪ ಮತದಿಂದ ಗೆದ್ದಿದ್ದಿರಿ. ನಿಮ್ಮ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಸೋತು ಶರಣಾಯಿತು. ಆಗ ನಿಮಗೆ “ಧಮ್” ಎಂಬ ಶಬ್ದ ನೆನಪಿಗೆ ಬರಲಿಲ್ಲವೇ?
ಧಮ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರೇ, ಸರಿಯಾಗಿ ವಿಚಾರಿಸಿದರೆ ನಿಮಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವಂತ ಕ್ಷೇತ್ರವೇ ಇಲ್ಲ. ಬಾದಾಮಿ ಬಿಡುವುದಕ್ಕೆ ಈಗಾಗಲೇ ನಿರ್ಧರಿಸಿದ್ದೀರಿ. ವಲಸೆ ಹಕ್ಕಿಗೆ ವಿಶ್ರಾಂತಿಗೂ ಗೂಡು ಇಲ್ಲದಂತಾಗಿದೆ. ನಿಮ್ಮ ಧಮ್ ಎಲ್ಲಿ ಹೋಯಿತು ಸಿದ್ದರಾಮಯ್ಯ ಎಂದು ಬಿಜೆಪಿ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದೆ.