ಬೆಂಗಳೂರು: ಶನಿವಾರ ಅರಮನೆ ಮೈದಾನದಲ್ಲಿ (Palace Ground) ರಾಜ್ಯ ಬಿಜೆಪಿ (BJP) ವಿಶೇಷ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯ ಉದ್ಧೇಶ ಇಟ್ಟುಕೊಂಡು ಈ ಸಭೆ ನಡೆಯುತ್ತಿದ್ದು, ಸಭೆಯಲ್ಲಿ 900ಕ್ಕೂ ಅಧಿಕ ಆಹ್ವಾನಿತರು ಭಾಗವಹಿಸಲಿದದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕು. ಬಡವರ ವಿರೋಧಿ ಸರ್ಕಾರದ ಬಗ್ಗೆ ಜನರಿಗೆ ಸತ್ಯಾಂಶಗಳನ್ನು ತಲುಪಿಸಬೇಕು ಎಂದು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿಯವರ (Narendra Modi) ನೇತೃತ್ವದ ಸರ್ಕಾರದ ಕಾರ್ಯಕ್ರಮಗಳಿಂದಾಗಿ ಜನರು ಪ್ರಧಾನಿ ಅವರ ಹಿಂದೆ ಇದ್ದಾರೆ. ಕೇಂದ್ರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಉದ್ದೇಶಿಸಲಾಗಿದೆ. ಮೋದಿಜೀ ಅವರ ಜನಪ್ರಿಯತೆಯನ್ನು ಮತವನ್ನಾಗಿ ಪರಿವರ್ತಿಸಿ ಕರ್ನಾಟಕವು ದಕ್ಷಿಣ ಭಾರತ ಬಿಜೆಪಿ ಹೆಬ್ಬಾಗಿಲು ಎಂದು ಸಾಬೀತು ಪಡಿಸುತ್ತೇವೆ ಎಂದು ಹೇಳಿದ್ದಾರೆ.
28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇದೆ. ರಾಜ್ಯದಾದ್ಯಂತ ನರೇಂದ್ರ ಮೋದಿ ಅವರ ಪರವಾದ ಅಲೆ ಇದೆ. ಹೀಗಾಗಿ ನಮ್ಮ ಗುರಿ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.