ರಾಯಚೂರು : ಭ್ರಷ್ಟಾಚಾರ ಮಾಡೋದೇ ಭಾರತೀಯ ಜನತಾ ಪಾರ್ಟಿಯ ಸಂಸ್ಕಾರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಕೃಷ್ನ ಬೈರೇಗೌಡ ವಾಗ್ದಾಳಿ ಮಾಡಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರ ಕೊರೊನಾ ಸಾಮಗ್ರಿ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ಮಾಡಿ ಜನರಿಗೆ ಮೋಸ ಮಾಡಿದೆ. ವೆಂಟಿಲೇಟರ್, ಪಿಪಿಇ ಕಿಟ್ ಹಾಗೂ ಮಾಸ್ಕ್ ಖರೀದಿಯಲ್ಲಿ 4,500 ಕೋಟಿ ರೂ. ಅವ್ಯವಹಾರ ನಡೆದಿದೆ. ಈ ಕುರಿತಾಗಿ ವೈಟ್ ಪೇಪರ್ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಂದ ಹಣ ಲೂಟಿ ಮಾಡಲು ಹೊರಟಿದ್ದರೂ ಸರ್ಕಾರ ಸುಮ್ಮನಿದ್ದು ಇದರಲ್ಲಿ ಸರ್ಕಾರ ಶಾಮೀಲಾಗಿದೆ ಎಂದು ಆರೋಪಿಸಿದರು. ಅಲ್ಲದೆ ಕೋವಿಡ್ ನಲ್ಲಾಗಿರುವ ಭ್ರಷ್ಟಾಚಾರದ ತನಿಖೆಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮಾಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಡಿಕೆಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರ ಕುರಿತಾಗಿ ಮಾಜಿ ಸಚಿವ ನೂತನ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕೃಷ್ಣಬೈರೇಗೌಡ, ಜನರ ದಿಕ್ಕು ತಪ್ಪಿಸಲು ಸಿಪಿ ಯೋಗೀಶ್ವರ್ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.