ಬಿಎಂಟಿಸಿಯಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿರುವುವ ಸಂಗತಿ ಬೆಳಕಿಗೆ ಬಂದಿದ್ದು, ಹಿರಿಯ ಅಧಿಕಾರಿಗಳ ಸಹಿ ನಕಲು ಮಾಡಿದ ಆರೋಪದ ಹಿನ್ನೆಲೆಯಲ್ಲಿ 7 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಈಗಾಗಲೇ ವಿಲ್ಸನ್ ಗಾರ್ಡನ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಿಎಂಟಿಸಿ ಕಮರ್ಷಿಯಲ್ ವಿಭಾಗದಲ್ಲಿ ಕೋಟಿಗಟ್ಟಲೆ ರೂಪಾಯಿಯ ಅವ್ಯವಹಾರ ನಡೆದಿದ್ದು, ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 7 ಜನ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಸಹಾಯಕ ಭದ್ರತಾ ಮತ್ತು ವಿಜಿಲೆನ್ಸ್ ಅಧಿಕಾರಿಗಳಾದ ಸಿ.ಕೆ ರಮ್ಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೋಲಿಸ್ ಠಾಣೆಯಲ್ಲಿ 7 ಜನ ಹಿರಿಯ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿದೆ.
ಆರೋಪಿ ಶ್ರೀರಾಮ್ ಮುಲ್ಕಾವನ್ ಅಧಿಕಾರಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನುಳಿದವರಿಗಾಗಿ ಬಲೆ ಬೀಸಲಾಗಿದೆ.
ವ್ಯವಸ್ಥಾಪಕ ನಿರ್ದೇಶಕರಾದ (MD) ಶಿಖಾ ಅವರ ಮತ್ತು ಹಿಂದಿದ್ದ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕ ಅರುಣ್.ಕೆ ಅವರ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡುವ ಮೂಲಕ ನಕಲು ಮಾಡಿ, ಕೋಟ್ಯಾಂತರ ಹಣ ವಂಚಿಸಿದ್ದಾರೆ ಎಂದು ದೂರು ಸಲ್ಲಿಕೆಯಾಗಿದೆ.
ನಕಲಿ ದಾಖಲೆಗಳ ಸೃಷ್ಟಿ ಮೂಲಕ 10.50 ಕೋಟಿ, 6.91 ಲಕ್ಷ ಹಾಗೂ 21.64 ಲಕ್ಷ, 1.5ಲಕ್ಷ ಸೇರಿದಂತೆ ಸುಮಾರು 17 ಕೋಟಿ ರೂ. ಹಣ ಲಪಟಾಯಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕಾವನ್ ಈಗಾಗಲೇ ಬಂಧಿಯಾಗಿದ್ದು, ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ ಎಸ್. ಮದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕರು ಮಮತಾ. ಬಿ.ಕೆ, ಸಹಾಯಕ ಸಂಚಾರ ಅಧೀಕ್ಷಕಿ ಅನಿತಾ.ಟಿ, ಸಹಾಯಕ ಸಂಚಾರ ನಿರೀಕ್ಷಕಿ ಗುಣಶೀಲ, ಕಿರಿಯ ಸಹಾಯಕರಾದ ವೆಂಕಟೇಶ್. ಆರ್ ಮತ್ತು ಪ್ರಕಾಶ್ ಕೊಪ್ಪಳ ಅವರ ವಿರುದ್ಧ ದೂರು ದಾಖಲಾಗಿದೆ.