ಆರ್.ಆರ್ ನಗರ: ಶೇ.45.24
ಶಿರಾ ಕ್ಷೇತ್ರ: ಶೇ.82.31
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂ ಮತಯಂತ್ರಗಳಲ್ಲಿ ಭದ್ರವಾಗಿದೆ.
ಆದರೆ, ರಾಜಧಾನಿ ಬೆಂಗಳೂರಿನ ಆರ್.ಆರ್ ನಗರ ಕ್ಷೇತ್ರದ ಮತದಾರರು ಚುನಾವಣೆಗೆ ನೀರಸ ಪ್ರತಿಕ್ರಿಯೆ ತೋರಿಸಿದ್ದು, ಕೇವಲ ಶೇ.45.24ರಷ್ಟು ಮಾತ್ರ ಮತದಾನವಾಗಿದೆ. ಆರ್.ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ನ ಕುಸುಮಾ, ಜೆಡಿಎಸ್ನಿಂದ ಕೃಷ್ಣಮೂರ್ತಿ ಸೇರಿ 16 ಅಭ್ಯರ್ಥಿಗಳು ಸ್ಪರ್ಧೆ ನಡೆಸಿದಿದ್ದರು. ಈ 16 ಅಭ್ಯರ್ಥಿಗಳ ಹಣೆಬರಹ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಆರ್.ಆರ್ ನಗರ ಕ್ಷೇತ್ರ ವ್ಯಾಪ್ತಿಯ ಮತದಾರರು ಮತದಾನಕ್ಕೆ ಹಿಂದೇಟು ಹಾಕಿದ್ದಾರೆ. ಇದರ ಪರಿಣಾಮ ಮತದಾನ ಪ್ರಮಾಣದಲ್ಲಿ ಭಾರಿ ಕುಸಿತ ದಾಖಲಾಗಿದೆ.
ಬೆಳಗ್ಗೆ ಮತ್ತು ಸಂಜೆ ಮತದಾನ ಪ್ರಕ್ರಿಯೆ ಬಿರುಸು ಪಡೆದಿರುವುದನ್ನು ಬಿಟ್ಟರೆ ಉಳಿದ ಅವಧಿಯಲ್ಲಿ ಮತದಾನ ಅತ್ಯಂತ ನೀರಸವಾಗಿತ್ತು. ಅತ್ಯಂತ ಸುಶಿಕ್ಷಿತ ಮತದಾರರು ಎನಿಸಿಕೊಂಡ ನಗರ ಪ್ರದೇಶದ ಮತದಾರರು ಹಕ್ಕು ಚಲಾಯಿಸಲು ಉತ್ಸಾಹ ತೋರಿಸಿಲ್ಲ. ಇದಕ್ಕೆ ಕಾರಣ ಹೆಮ್ಮಾರಿ ಕೊರೊನಾ.
ಮತದಾನದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಆರ್.ಆರ್ ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಲೇ ಇಲ್ಲ. ಯುವಕರಿಗಿಂತ ಹಿರಿಯರೇ ಮತಗಟ್ಟೆಗೆ ಹೆಚ್ಚಾಗಿ ಧಾವಿಸಿದ್ದರು. ಹಾದಿಯಲ್ಲಿ ಹೋಗುವ ಮಾರಿಯನ್ನು ಮನೆಯೊಳಗೆ ಯಾಕೆ ಕರೆದುಕೊಳ್ಳಬೇಕು ಎಂಬ ಗಾದೆಯ ಮಾತಿಗೆ ಆರ್.ಆರ್ ನಗರ ಕ್ಷೇತ್ರದ ಮತದಾರರು ಕೊರೊನಾ ಕಾರಣಕ್ಕೆ ಮತದಾನಕ್ಕೆ ಹೆಚ್ಚು ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ.
ಆರ್.ಆರ್ ನಗರದಲ್ಲಿ ಹಿಂದಿನ ಚುನಾವಣೆಗಳ ಮತದಾನದ ಪ್ರಮಾಣ..
2013-ವಿಧಾನಸಭೆ ಚುನಾವಣೆ: ಶೇ.56.80
2015-ಬಿಬಿಎಂಪಿ ಚುನಾವಣೆ: ಶೇ.50.17
2018-ವಿಧಾನಸಭೆ ಚುನಾವಣೆ:ಶೇ.54.34
2019-ಲೋಕಸಭೆ ಚುನಾವಣೆ:ಶೇ.53.65
2020-ವಿಧಾನಸಭೆ ಉಪಚುನಾವಣೆ:ಶೇ.45.24
ಶಿರಾದಲ್ಲಿ ಕೊರೊನಾ ನಡುವೆ ದಾಖಲೆ ಮತದಾನ
ಆರ್.ಆರ್ ನಗರಕ್ಕೆ ಹೋಲಿಸಿದರೆ ಶಿರಾದಲ್ಲಿ ಪರಿಸ್ಥಿತಿ ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ಕೊರೊನಾ ಹರಡುವ ಬೀತಿಯ ನಡುವೆಯೂ ಶಿರಾ ಕ್ಷೇತ್ರದ ಮತದಾರರು ದಾಖಲೆ ಮತದಾನ ಮಾಡಿದ್ದಾರೆ.
ಬೆಳಿಗ್ಗೆ ಉತ್ಸಾಹದಿಂದಲೇ ಶುರುವಾದ ಮತದಾನ ಸಂಜೆಯವರೆಗೂ ಇದೇ ರೀತಿ ಮುಂದುವರೆದಿತ್ತು. ಒಟ್ಟಾರೆ ಶಿರಾ ಕ್ಷೇತ್ರದಲ್ಲಿ ಶೇ.82.31ರಷ್ಟು ಭರ್ಜರಿ ಮತದಾನವಾಗಿದೆ.
ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ, ಕಾಂಗ್ರೆಸ್ನ ಟಿ.ಬಿ ಜಯಚಂದ್ರ, ಜೆಡಿಎಸ್ನ ಅಮ್ಮಾಜಮ್ಮ ಸೇರಿ 15 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ನವೆಂಬರ್ 10ಕ್ಕೆ ಫಲಿತಾಂಶ ಹೊರಬೀಳಲಿದೆ.
ಒಟ್ಟು ಮತಗಳು-2.15 ಲಕ್ಷ
ಚಲಾವಣೆಯಾದ ಮತಗಳು-1.82 ಲಕ್ಷ
ಪುರುಷ ಮತದಾರರಿಂದ ಮತದಾನ-91,959
ಮಹಿಳಾ ಮತದಾರರಿಂದ ಮತದಾನ-85,594
ಅಂಚೆ ಮತಗಳು: 4821
ಒಟ್ಟು ಚಲಾವಣೆಯಾದ ಮತಗಳು: 1,82,374
ತಣ್ಣಗಾಯ್ತು ಸಮರ ಕಣ, ಇನ್ನೇನಿದ್ದರೂ ಲೆಕ್ಕಾಚಾರ..!
ಸತತ ಮೂರು ವಾರಗಳ ಕಾಲ ಆರ್.ಆರ್ ನಗರ ಹಾಗೂ ಶಿರಾ ಕ್ಷೇತ್ರಗಳು ರಾಜಕೀಯ ಪಕ್ಷಗಳ ನಡುವೆ ಸಮರದ ಕಣಗಳಂತೆ ಮಾರ್ಪಟ್ಟಿದ್ದವು. ಮತದಾರನ್ನು ಸೆಳೆಯಲು ಭರವಸೆಗಳಗಳ ಮಹಾಪೂರದ ಜತೆಗೆ, ಒಬ್ಬರನೊಬ್ಬರು ಆರೋಪ-ಪ್ರತ್ಯಾರೋಪಗಳ ಜತೆ, ಮಾತಿನ ಬಾಂಬ್ಗಳನ್ನು ಸಿಡಿಸುವ ಮೂಲಕ ಭರ್ಜರಿ ಕೆಸರೆರಚಾಟ ಮಾಡಿಕೊಂಡಿದ್ದರು.
ಆರ್.ಆರ್ ನಗರದಲ್ಲಿ ಮತದಾನ ಪ್ರಮಾಣ ಕುಸಿದಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಮುನಿರತ್ನ ಗೆಲುವು ಸಾಧಿಸಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗಬೇಕು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ ಆಗಿತ್ತು. ಆದರೆ, ಆಗಿದ್ದೇ ಬೇರೆ. ಭಾರಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವುದು ಆಡಳಿತಾರೂಢ ಬಿಜೆಪಿಗೆ ನಾಯಕರನ್ನು ಕಂಗಾಲಾಗುವಂತೆ ಮಾಡಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಪಾಳಯದಲ್ಲೂ ಆತಂಕ ಮನೆ ಮಾಡುವಂತೆ ಮಾಡಿದೆ.
ಶಿರಾದಲ್ಲಿ ಭರ್ಜರಿ ಮತದಾನವಾಗಿರುವ ಹಿನ್ನೆಲೆಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಮತದಾರ ಪ್ರಭುಗಳು ನೀಡಿದ ತೀರ್ಪು ಯಾರ ಕೊರಳಿಗೆ ವಿಜಯದ ಮಾಲೆಯಾಗಿ ಬೀಳಿದೆ ಎಂಬುದಕ್ಕೆ ನ.10ರವರೆಗೆ ಕಾಯಲೇಬೇಕಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel