ವೈದ್ಯಕೀಯ ಸೇವೆಗೆ ಪ್ರತ್ಯೇಕವಾಗಿ ಪಡಿತರ ಚೀಟಿ ನೀಡಲು ಚಿಂತನೆ ನಡೆಸಲಾಗುತ್ತಿದ್ದು, ಮನೆ ಮನೆ ಸರ್ವೆ ಮಾಡಿ ಸಲಹೆ ಪಡೆದು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಈ ಕುರಿತ ಮಾತನಾಡಿದ ಅವರು, ಪಡಿತರ ಚೀಟಿದಾರರನ್ನು ಎ, ಬಿ ಎಂದು ವರ್ಗೀಕರಿಸುವ ಕುರಿತು ಚಿಂತನೆ ನಡೆಸಲಾಗಿದೆ. ಆರೋಗ್ಯ ಸೇವೆಗಾಗಿಯೇ ಪ್ರತ್ಯೇಕ ಪಡಿತರ ಚೀಟಿ ನೀಡಲು ಚಿಂತನೆ ನಡೆಸಲಾಗಿದೆ. ಈ ಕುರತು ಮನೆ ಮನೆ ಸರ್ವೇ ಮಾಡಿ ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದಾಗಿ ಎಷ್ಟು ಜನ ಅಕ್ಕಿ ಮತ್ತು ಆರೋಗ್ಯ ಸೇವೆ ಎರಡನ್ನೂ ಬಯಸುತ್ತಾರೆ ಎಂಬುವುದು ತಿಳಿಯಲಿದೆ ಎಂದು ಹೇಳಿದ್ದಾರೆ.
ಬಿಪಿಎಲ್ ಕಾರ್ಡ್ ಗಳಿಗಾಗಿ ಹೊಸದಾಗಿ ಮೂರು ಲಕ್ಷ ಅರ್ಜಿಗಳು ಬಂದಿದ್ದು, ವೈದ್ಯಕೀಯ ಸೌಲಭ್ಯದ ಅಗತ್ಯ ಇರುವವರಿಗೆ ಆದ್ಯತೆ ನೀಡಲಾಗುವುದು. ಪರಿಶೀಲನೆ ನಡೆಸಿ ಅರ್ಹತೆಯುಳ್ಳವರಿಗೆ ನೀಡಲಾಗುವುದು. ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಹಣ ವರ್ಗಾವಣೆಯಾಗುತ್ತಿದ್ದು, ರಾಜ್ಯದಲ್ಲಿ 1,28,17,337 ಪಡಿತರ ಚೀಟಿದಾರರು ಇದ್ದು, 97,27,165 ಪಡಿತರ ಚೀಟಿದಾರರಿಗೆ ಈ ರೀತಿ ಅಕ್ಕಿ ಬದಲು ಹಣ ವರ್ಗಾವಣೆಯಾಗಲಿದೆ ಎಂದು ಹೇಳಿದ್ದಾರೆ.