ಯಾದಗಿರಿ: ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಗೆ ಕ್ರೂಸರ್ (Crusier- Lorry Accident) ಡಿಕ್ಕಿ ಹೊಡೆ ಪರಿಣಾಮ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿರುವ ಘಟನೆ ಯಾದಗಿರಿ (Yadagiri) ತಾಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 (ಚಿ)ರಲ್ಲಿ ನಡೆದಿದೆ.
ಘಟನೆಯಲ್ಲಿ ಮುನೀರ್(40), ನಯಾಮತ್ (40), ಮುದ್ದತ್ ಶಿರ್ (12), ರಮಿಜಾ ಬೇಗಂ (50), ಸುಮ್ಮಿ (12) ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರೆಲ್ಲರೂ ಸಂಬಂಧಿಕರು ಎನ್ನಲಾಗಿದೆ. ಕ್ರೂಸರ್, ಆಂಧ್ರಪ್ರದೇಶ (Andhrapradesh) ದ ನಂದ್ಯಾಲ್ ಜಿಲ್ಲೆಯಿಂದ ಕಲಬುರಗಿಯ ಖಾಜಾ ಬಂದೇನವಾಜ ದರ್ಗಾದ ಉರುಸ್ ಜಾತ್ರೆಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಓರ್ವ ಬಾಲಕಿ, ಬಾಲಕ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ನಿದ್ದೆಯ ಮಂಪರಿನಲ್ಲಿದ್ದ ಕ್ರೂಸರ್ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಹಿನ್ನೆಲೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ 13 ಜನರಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಐವರ ಸ್ಥಿತಿ ಕೂಡ ಚಿಂತಾಜನಕವಾಗಿದೆ.
ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ ಪ್ರತಿಕ್ರಿಯೆ ನೀಡಿ, ಹೈವೇ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕ್ರೂಷರ್ ವಾಹನ ಡಿಕ್ಕಿ ಹೊಡೆದಿದೆ. ಕ್ರೂಸರ್ ವಾಹನದಲ್ಲಿದ್ದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಂದ್ಯಾಲ ಗ್ರಾಮದ 18 ಜನ ಕ್ರೂಷರ್ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರೆಲ್ಲ ಕಲಬುರಗಿ (kalaburagi) ಯ ಖಾಜಾ ಬಂದೇನವಾಜ ಉರುಸ್ ಗೆ ತೆರಳುತ್ತಿದ್ದರು. ಬೆಳಗಿನ 4 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಗಾಯಗೊಂಡ 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.