ಜನಸಾಮಾನ್ಯರಿಗೆ ಸರ್ಕಾರದ ಯಾವುದೇ ಇಲಾಖೆಯ ಮೇಲೆ ನಂಬಿಕೆ ಹೋದರೂ, ಕೊನೆಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಚಲವಾದ ಭರವಸೆ ಇರುತ್ತದೆ. ನ್ಯಾಯಾಲಯದಲ್ಲಿ ತಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಬಹುತೇಕರದ್ದು. ಆದರೆ, ನ್ಯಾಯದಾನ ಮಾಡಬೇಕಾದ ಪೀಠಗಳೇ ಲಂಚದ ಆಸೆಗೆ ಬಿದ್ದರೆ ನ್ಯಾಯ ಎಲ್ಲಿದೆ ಎಂದು ಪ್ರಶ್ನಿಸುವಂತಾಗುತ್ತದೆ. ಮುಂಬೈನಲ್ಲಿ ನಡೆದ ಒಂದು ಘಟನೆ ಇಡೀ ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಕಪ್ಪು ಚುಕ್ಕೆ ಇಟ್ಟಿದೆ.
ಭೂ ವಿವಾದವೊಂದರಲ್ಲಿ ತಮ್ಮ ಪರವಾಗಿ ತೀರ್ಪು ನೀಡಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ, ಮುಂಬೈನ ಸಿವಿಲ್ ನ್ಯಾಯಾಲಯದ ಗುಮಾಸ್ತನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ನ್ಯಾಯಾಧೀಶರೇ ಆಗಿದ್ದು, ಅವರು ಸದ್ಯ ನಾಪತ್ತೆಯಾಗಿದ್ದಾರೆ. ಈ ಘಟನೆಯು ನ್ಯಾಯಾಲಯದ ಕತ್ತಲ ಕೋಣೆಗಳಲ್ಲಿ ನಡೆಯಬಹುದಾದ ಭ್ರಷ್ಟ ವ್ಯವಹಾರದ ಮುಖವಾಡವನ್ನು ಕಳಚಿದೆ.
ಶೌಚಾಲಯದಲ್ಲಿ ಶುರುವಾದ ಲಂಚದ ಡೀಲ್
ಮುಂಬೈನ ಉದ್ಯಮಿಯೊಬ್ಬರು ತಮ್ಮ ಪತ್ನಿಗೆ ಸೇರಿದ ಭೂಮಿಯನ್ನು ಇತರರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರಿಂದ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣವು ಮುಂಬೈನ ಮಜಗಾಂವ್ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಏಜಾಜುದ್ದೀನ್ ಸಲಾವುದ್ದೀನ್ ಕಾಜಿ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆಯ ನಡುವೆ, ವಿರಾಮದ ಸಮಯದಲ್ಲಿ ಉದ್ಯಮಿ ಶೌಚಾಲಯಕ್ಕೆ ಹೋದಾಗ, ನ್ಯಾಯಾಧೀಶರ ಗುಮಾಸ್ತ ಕಮ್ ಟೈಪಿಸ್ಟ್ ಚಂದ್ರಕಾಂತ್ ವಾಸುದೇವ್ ಕೂಡ ಅವರ ಹಿಂದೆಯೇ ಹೋಗಿದ್ದಾನೆ. ಇಬ್ಬರೂ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ, ಅತ್ಯಂತ ಸಹಜವಾಗಿ ಚಂದ್ರಕಾಂತ್, “ನೀವು ನ್ಯಾಯಾಧೀಶರ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ, ತೀರ್ಪು ನಿಮ್ಮ ಪರವಾಗಿ ಬರುತ್ತದೆ” ಎಂದು ಪಿಸುಗುಟ್ಟಿದ್ದಾನೆ. ಗಲಿಬಿಲಿಗೊಂಡ ಉದ್ಯಮಿ, “ಹಾಗೆಂದರೆ ಏನು?” ಎಂದು ಪ್ರಶ್ನಿಸಿದಾಗ, ಆತ ನೇರವಾಗಿ 25 ಲಕ್ಷ ರೂಪಾಯಿ ಎಂದು ಬೇಡಿಕೆ ಇಟ್ಟಿದ್ದಾನೆ. ಇದನ್ನು ಕೇಳಿ ದಿಗ್ಭ್ರಾಂತರಾದ ಉದ್ಯಮಿ ಒಪ್ಪದೇ ಅಲ್ಲಿಂದ ಹೊರಬಂದಿದ್ದಾರೆ.
15 ಲಕ್ಷಕ್ಕೆ ಚೌಕಾಸಿ, ಎಸಿಬಿಗೆ ದೂರು
ಕೆಲವು ದಿನಗಳ ನಂತರ, ಚಂದ್ರಕಾಂತ್ ಮತ್ತೆ ಉದ್ಯಮಿಗೆ ಕರೆ ಮಾಡಿ, “ಚೆನ್ನಾಗಿ ಯೋಚಿಸಿ, ನಂತರ ತೀರ್ಪು ವಿರುದ್ಧವಾಗಿ ಬಂತೆಂದು ಅಳಬೇಡಿ,” ಎಂದು ಎಚ್ಚರಿಸಿದ್ದಾನೆ. ಪದೇ ಪದೇ ಕರೆ ಮಾಡಿ ಪೀಡಿಸಲು ಶುರುಮಾಡಿದಾಗ, ಚೌಕಾಸಿಯ ನಂತರ ಲಂಚದ ಮೊತ್ತವನ್ನು 15 ಲಕ್ಷ ರೂಪಾಯಿಗೆ ಇಳಿಸಿದ್ದಾನೆ. ಈ ಲಂಚಾವತಾರದಿಂದ ಬೇಸತ್ತ ಉದ್ಯಮಿ, ನೇರವಾಗಿ ಎಸಿಬಿ ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ.
ಎಸಿಬಿ ಬಲೆಗೆ ರೆಡ್‌ಹ್ಯಾಂಡ್ ಆಗಿ ಬಿದ್ದ ಗುಮಾಸ್ತ
ಎಸಿಬಿ ಅಧಿಕಾರಿಗಳ ಸೂಚನೆಯಂತೆ, ಉದ್ಯಮಿ ಗುಮಾಸ್ತನಿಗೆ ಕರೆ ಮಾಡಿ ಹಣ ನೀಡಲು ಒಪ್ಪಿಕೊಂಡರು. ಚಂದ್ರಕಾಂತ್ ಹಣ ಪಡೆಯಲು ಒಂದು ಸ್ಥಳವನ್ನು ನಿಗದಿಪಡಿಸಿದ. ಅದರಂತೆ ಉದ್ಯಮಿ ಹಣದೊಂದಿಗೆ ಆ ಸ್ಥಳಕ್ಕೆ ತೆರಳಿದರು. ಅವರನ್ನು ಸಾಮಾನ್ಯರಂತೆ ಹಿಂಬಾಲಿಸಿದ ಎಸಿಬಿ ಅಧಿಕಾರಿಗಳ ತಂಡ, ಚಂದ್ರಕಾಂತ್ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಂತೆಯೇ ರೆಡ್‌ಹ್ಯಾಂಡ್ ಆಗಿ ಬಂಧಿಸಿತು.
ಬಂಧನಕ್ಕೊಳಗಾಗುತ್ತಿದ್ದಂತೆ ಆತ, “ನಾನು ಕೇವಲ ನ್ಯಾಯಾಧೀಶರು ಹೇಳಿದಂತೆ ಮಾಡಿದ್ದೇನೆ,” ಎಂದು ಬಾಯಿಬಿಟ್ಟಿದ್ದಾನೆ. ತಕ್ಷಣ ಎಸಿಬಿ ಅಧಿಕಾರಿಗಳು, ಆತನಿಂದಲೇ ನ್ಯಾಯಾಧೀಶ ಕಾಜಿಗೆ ಕರೆ ಮಾಡಿಸಿದರು. “ಹಣ ಸಿಕ್ಕಿದೆ ಸಾರ್,” ಎಂದು ಚಂದ್ರಕಾಂತ್ ಹೇಳಿದಾಗ, ಆ ಕಡೆಯಿಂದ ನ್ಯಾಯಾಧೀಶರು, “ಗುಡ್, ಆ ಹಣವನ್ನು ನಾಳೆ ನನಗೆ ಕೊಡು,” ಎಂದು ಉತ್ತರಿಸಿದ್ದಾರೆ. ಈ ಸಂಭಾಷಣೆಯನ್ನು ಎಸಿಬಿ ರೆಕಾರ್ಡ್ ಮಾಡಿಕೊಂಡಿದೆ.
ಜಡ್ಜ್ ನಾಪತ್ತೆ, ಮೆಸೇಜ್‌ಗಳೇ ಪ್ರಮುಖ ಸಾಕ್ಷಿ
ಗುಮಾಸ್ತನ ಬಂಧನದ ವಿಚಾರ ತಿಳಿಯದ ನ್ಯಾಯಾಧೀಶ ಕಾಜಿ, ಆತನ ಮೊಬೈಲ್‌ಗೆ ನಿರಂತರವಾಗಿ ಕರೆ ಮತ್ತು ಸಂದೇಶಗಳನ್ನು ಕಳುಹಿಸಿದ್ದಾರೆ. ಹಣ ಪಡೆದು ಗುಮಾಸ್ತ ಪರಾರಿಯಾಗಿರಬಹುದೇ ಎಂಬ ಆತಂಕದಲ್ಲಿ ಅವರು ಕಳುಹಿಸಿದ ಪ್ರತಿ ಸಂದೇಶವೂ ಈಗ ಪ್ರಕರಣದ ಪ್ರಮುಖ ಸಾಕ್ಷಿಯಾಗಿದೆ. ನಂತರ ಎಸಿಬಿ ತಂಡವು ನ್ಯಾಯಾಧೀಶರ ಮನೆಗೆ ದಾಳಿ ನಡೆಸಿದಾಗ, ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ. ಅಂದಿನಿಂದ ನ್ಯಾಯಾಧೀಶ ಏಜಾಜುದ್ದೀನ್ ಸಲಾವುದ್ದೀನ್ ಕಾಜಿ ನಾಪತ್ತೆಯಾಗಿದ್ದಾರೆ.
ದೀಪದ ಕೆಳಗೆ ಕತ್ತಲು
ನ್ಯಾಯಾಧೀಶರು ಯಾವುದೇ ಆಮಿಷಗಳಿಗೆ ಒಳಗಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಅವರಿಗೆ ಉನ್ನತ ಮಟ್ಟದ ಸಂಬಳ ಮತ್ತು ಸೌಲಭ್ಯಗಳನ್ನು ನೀಡುತ್ತದೆ. ಕೆಳ ಹಂತದ ನ್ಯಾಯಾಧೀಶರ ಆರಂಭಿಕ ವೇತನವೇ ತಿಂಗಳಿಗೆ 1.44 ಲಕ್ಷದಿಂದ 1.94 ಲಕ್ಷದವರೆಗೆ ಇರುತ್ತದೆ. ಸರ್ಕಾರಿ ಬಂಗಲೆ, ಕಾರು, ಆಳುಕಾಳುಗಳ ಸೌಲಭ್ಯವೂ ಇರುತ್ತದೆ. ಇಷ್ಟೆಲ್ಲಾ ಸವಲತ್ತುಗಳಿದ್ದರೂ, ನ್ಯಾಯ ನೀಡಬೇಕಾದವರೇ ಭ್ರಷ್ಟಾಚಾರಕ್ಕೆ ಇಳಿದಿರುವುದು ವ್ಯವಸ್ಥೆಯ ದುರಂತ. ಈ ಘಟನೆಯು ಕೇವಲ ಒಬ್ಬ ನ್ಯಾಯಾಧೀಶರ ಕತೆಯಲ್ಲ, ಬದಲಿಗೆ ನ್ಯಾಯಾಂಗದಲ್ಲಿರಬಹುದಾದ ವ್ಯವಸ್ಥಿತ ಜಾಲದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ಜನಸಾಮಾನ್ಯರು ಕೊನೆಯ ಭರವಸೆ ಎಂದು ನೋಡುವ ನ್ಯಾಯಾಲಯಗಳಲ್ಲೇ ಇಂತಹ ಘಟನೆಗಳು ನಡೆದರೆ, ನಿಜಕ್ಕೂ ನ್ಯಾಯ ಎಲ್ಲಿದೆ ಎಂದು ಪ್ರತಿಯೊಬ್ಬರೂ ಕೇಳುವಂತಾಗಿದೆ.







