ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸುವ ವಿಚಾರವು ಹೊರಬೀಳುತ್ತಿದ್ದಂತೆಯೇ ಬಸನಗೌಡ ಪಾಟೀಲ್ ಯತ್ನಾಳ್ ಬಣದಿಂದ ಒಂದೊಂದೇ ಅಸ್ತ್ರಗಳು ಆಚೆ ಬರುತ್ತಿವೆ. ನೋಟಿಸ್ ಬಳಿಕ ಸೈಲೆಂಟ್ ಆಗಿದ್ದ ಯತ್ನಾಳ್ ಇದೀಗ ಮತ್ತೆ ವೈಲೆಂಟ್ ಆಗಿದ್ದಾರೆ. ಇದಕ್ಕೆ ರಮೇಶ್ ಜಾರಕಿಹೊಳಿ ಸಹ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿನ ಬಣಬಡಿದಾಟ ಅತಿರಕಕ್ಕೇರಿದೆ. ನಿನ್ನೆ ಸಹ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿಕೊಂಡು ವಿಜಯೇಂದ್ರ ವಿರುದ್ಧ ಮುಗಿಬಿದ್ದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ವಿಜಯೇಂದ್ರ, ಇಟ್ಟ ಗುರಿ, ಮುಂದಿಟ್ಟ ಹೆಜ್ಜೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದಿದ್ದಾರೆ. ಈ ಮೂಲಕ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿಮ್ಮ ಮಾತಿನಿಂದ ನನ್ನ ಅಧಿಕಾರ ಕಸಿದುಕೊಳ್ಳಲು ಆಗುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
ವಿಜಯೇಂದ್ರ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್: ವಿಜಯೇಂದ್ರ (BY Vijayendra) ಮಾಡಿದ ತಪ್ಪಿನಿಂದಲೇ ಯಡಿಯೂರಪ್ಪ (BS Yediyurappa) ಜೈಲಿಗೆ ಹೋದದ್ದು, ಅವನಿಂದಲೇ ಹಾಳಾಗಿದ್ದು. ಮೊದಲು ಮಗನ ವ್ಯಾಮೋಹ ಬಿಡಲಿ. ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ. ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ. ಯಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ. ಬಿಬಿ ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಿಗೆ ಅನ್ಯಾಯ ಮಾಡಿದ್ದಾನೆ. ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನು ಮಣ್ಣಲ್ಲಿ ಇಟ್ಟಿದ್ದಾರೆ. ಸುಮ್ಮನೇ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂಡಲಿ ಎಂದು ವಾಗ್ದಾಳಿ ನಡೆಸಿದರು.
ವಿರೋಧಿಗಳ ವಿರುದ್ಧ ಅಬ್ಬರಿಸಿದ ವಿಜಯೇಂದ್ರ: ಇನ್ನು ಮತ್ತೊಂದೆಡೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಬಿಜೆಪಿ ಮಾಜಿ ಸಚಿವ ಕೆ ಶಿವನಗೌಡ ನಾಯಕ್ ಅಭಿಮಾನಿಗಳಲು ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ವಿಜಯೇಂದ್ರ, ನಾನು ರೈತ ನಾಯಕ ಯಡಿಯೂರಪ್ಪನ ಮಗನಾಗಿ ಹೇಳುತ್ತೇನೆ. ಶಿಕಾರಿಪುರ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಗುರುಹಿರಿಯರ ಆಶಿರ್ವಾದದಿಂದ ಮುನ್ನಡೆಯುತ್ತೇನೆ. ಭಗವಂತನ ಕೃಪೆ, ಹರಗುರು ಚರಮೂರ್ತಿಗಳ ಆಶಿರ್ವಾದ ನನ್ನ ಮೇಲಿದೆ ಎಂದು ಅಬ್ಬರಿಸಿದರು.
ವಿಜಯೇಂದ್ರ ಸಿಎಂ ಆಗ್ತಾರೆ ಎಂದ ಶಿವನಗೌಡ: ಇನ್ನು ಮಾಜಿ ಸಚಿವ ಕೆ ಶಿವನಗೌಡ ಅವರು ವಿಜಯೇಂದ್ರ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಈ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ವಿಜಯೇಂದ್ರ ಮುಂದೆ ಸಿಎಂ ಆಗೇ ಆಗುತ್ತಾರೆ. ಅಧಿಕಾರದ ಕತ್ತಿ ಹಿಡಿದು ಬಿಜೆಪಿ ಸರ್ಕಾರವನ್ನು ತರಬೇಕಿದೆ ಎಂದರು.








