ರಾಮನಗರ: ರಾಜ್ಯದಲ್ಲಿ ಚನ್ನಪಟ್ಟಣ ಉಪ ಚುನಾವಣೆಯ (channapatna ByElection) ಕಾವು ಲೋಕಸಭೆ ಫಲಿತಾಂಶ ಬರುತ್ತಿದ್ದಂತೆ ಶುರುವಾಗಿ ಬಿಟ್ಟಿದೆ. ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿ ದೋಸ್ತಿಯಲ್ಲಿಯೇ ಹಗ್ಗ-ಜಗ್ಗಾಟ ಶುರುವಾಗಿದೆ. ಈ ಮಧ್ಯೆ ಟಿಕೆಟ್ ಸಿಗದಿದ್ದರೂ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂದು ಮುಂದಾಗಿದ್ದ ವಿಪ ಸದಸ್ಯ ಸಿ.ಪಿ. ಯೋಗೇಶ್ವರ್(CP Yogeshwar) ಅವರಿಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.
ಹೀಗಾಗಿ ಯೋಗೇಶ್ವರ್ ಬೆಂಬಲಿಗರು ಆಯೋಜಿಸಿದ್ದ ಸಮಾನ ಮನಸ್ಕರ ಸಮಾವೇಶವನ್ನು ಕೊನೆಯ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಯೋಗೇಶ್ವರ್ ಅಭಿಮಾನಿ ಬಳಗ ಮತ್ತು ಸಮಾನ ಮನಸ್ಕರ ವೇದಿಕೆ ವತಿಯಿಂದ ಚನ್ನಪಟ್ಟಣ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ‘ನಮ್ಮ ಶಾಸಕ ನಮ್ಮ ಹಕ್ಕು’ ಹೆಸರಿನಲ್ಲಿ ಸಮಾವೇಶ ಹಮ್ಮಿಕೊಂಡಿತ್ತು. ಉಪಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದರೆ, ಸ್ವತಂತ್ರ ಸ್ಪರ್ಧೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸಮಾವೇಶ ನಡೆಸಲಾಗುತ್ತಿತ್ತು. ಆದರೆ, ಈ ಮಧ್ಯೆ ಇಂದು ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ತದಲ್ಲಿ ಸೋಮವಾರ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಚನ್ನಪಟ್ಟಣ ಅಭ್ಯರ್ಥಿ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಯೋಗೇಶ್ವರ್ ಅವರೊಂದಿಗೆ ಹೈಕಮಾಂಡ್ ಚರ್ಚೆ ನಡೆಸುವ ಸಾಧ್ಯತೆ ಇದೆ.
ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಟಿಕೆಟ್ ಗಾಗಿ ಪೈಪೋಟಿ ನಡೆದಿದೆ. ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಯೋಗೇಶ್ವರ್ ಮಾತನಾಡುತ್ತಿದ್ದಾರೆ. ಇದು ದೋಸ್ತಿಗೆ ಇರುಸು ಮುರುಸು ತಂದಿದೆ.