ಆರೋಗ್ಯ ಕರ್ನಾಟಕಕ್ಕೆ ಅಭಿಯಾನ, ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ವತಿಯಿಂದ ಗಾಂಧಿ ಜಯಂತಿಯವರೆಗೆ ನಡೆಯಲಿರುವ ʼಆರೋಗ್ಯ ಕರ್ನಾಟಕಕ್ಕೆ ಅಭಿಯಾನʼಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.
ಬಿಎಂಸಿಆರ್‌ಐ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ತದಾನ ಅಮೃತ ಮಹೋತ್ಸವ, ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದ ಜೊತೆಗೆ, ಆರೋಗ್ಯ ಕರ್ನಾಟಕಕ್ಕೆ ಅಭಿಯಾನಕ್ಕೆ ಸಚಿವರು ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ, ಮಹಾತ್ಮ ಗಾಂಧೀಜಿ ಜಯಂತಿ, ದೀನ್ ದಯಾಳ್ ಉಪಾಧ್ಯಾಯರ ಜಯಂತಿಯನ್ನು ಪರಿಗಣಿಸಿ, ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ 15 ದಿನಗಳ ಕಾಲ ಅಭಿಯಾನ ಮಾಡಲಾಗುತ್ತಿದೆ. ಅರಿವಿನ ಕೊರತೆಯಿಂದಾಗಿ ಜನರಿಗೆ ರೋಗ ಇರುವುದೇ ಗೊತ್ತಾಗುವುದಿಲ್ಲ. ಮಧುಮೇಹ ಅತಿಯಾದ ನಂತರವೇ ಅವರಿಗೆ ಆ ರೋಗ ಇದೆ ಎಂದು ತಿಳಿಯುತ್ತದೆ. ಇದರ ಬದಲು ನಿಯಮಿತವಾಗಿ ತಪಾಸಣೆ ಮಾಡಿಸಿದರೆ ಸಮಸ್ಯೆ ಉಂಟಾಗುವುದಿಲ್ಲ. ಈ ಉದ್ದೇಶವನ್ನು ಅಭಿಯಾನ ಹೊಂದಿದೆ ಎಂದರು.
ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ಬಗೆಯ ತಪಾಸಣೆ ಉಚಿತವಾಗಿದೆ. ಪ್ರತಿ ವರ್ಷವೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂಬ ಭಾವನೆ ಜನರಲ್ಲಿ ಬರಬೇಕು. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ ಅಸಾಂಕ್ರಾಮಿಕ ಕಾಯಿಲೆಗಳು ಎಷ್ಟು ಜನರಿಗೆ ಇದೆ ಎಂಬುದನ್ನು ಅಭಿಯಾನದಲ್ಲಿ ಪತ್ತೆ ಮಾಡಬೇಕಿದೆ. ಈ ಮೂಲಕ ಜನರ ಜೀವನ ವಿಧಾನದಲ್ಲಿ ಬದಲಾವಣೆ ತಂದು ಅವರ ಆರೋಗ್ಯ ವೃದ್ಧಿಗೆ ಶ್ರಮಿಸಬೇಕಿದೆ ಎಂದರು.
ರೋಗಿಗಳು ಬರುತ್ತಾರೆ, ಅವರಿಗೆ ಚಿಕಿತ್ಸೆ ನೀಡಬೇಕು ಎಂಬುದು ನಮ್ಮ ಆರೋಗ್ಯ ಇಲಾಖೆಯ ಧ್ಯೇಯವಲ್ಲ. ಜನರು ರೋಗಿಗಳಾಗಿ ಆಸ್ಪತ್ರೆಗೆ ಬರುವಂತಹ ಸ್ಥಿತಿಯೇ ಬರಬಾರದು ಎಂಬುದು ನಮ್ಮ ಧ್ಯೇಯ. ರೋಗ ಬರುವುದನ್ನೇ ತಡೆಗಟ್ಟುವುದೇ ಇಲಾಖೆಯ ಗುರಿ. ಇದಕ್ಕಾಗಿ ಆಶಾ ಕಾರ್ಯಕರ್ತೆಯರು, ವೈದ್ಯರು ಈ ಅಭಿಯಾನದಲ್ಲಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. 15-20 ಲಕ್ಷ ಮಕ್ಕಳಿಗೆ ಕಣ್ಣಿನ ಪರೀಕ್ಷೆ ಮಾಡಿ, ಅಗತ್ಯವಿದ್ದರೆ ಕನ್ನಡಕ ನೀಡಬೇಕು. ಅನೀಮಿಯಾದಿಂದ ಬಳಲುವವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಅನ್ನದಾನ ಮಹಾದಾನವಾದರೆ, ರಕ್ತದಾನವು ಶ್ರೇಷ್ಠದಾನವಾಗಿದೆ. ಅದೇ ರೀತಿ ಅಂಗಾಂಗಗಳ ದಾನ ಸರ್ವಶ್ರೇಷ್ಠ ದಾನವಾಗಿದೆ. ರಕ್ತದಾನ ಮಾಡುವುದರಿಂದ ದೇಹ ದುರ್ಬಲಗೊಳ್ಳುತ್ತದೆ ಎಂಬ ತಪ್ಪು ಭಾವನೆ ಇತ್ತು. ಆದರೆ ರಕ್ತ ನೀಡುವುದರಿಂದ ಅನೇಕ ರೋಗಗಳಿಂದ ದೂರವಿರಲು ಸಾಧ್ಯವಿದೆ. ರಕ್ತದೊತ್ತಡ, ಬೊಜ್ಜು, ಹೃದಯ ಸಂಬಂಧಿ ರೋಗಗಳ ಸಾಧ್ಯತೆ ರಕ್ತದಾನದಿಂದಲೇ ಕಡಿಮೆಯಾಗುತ್ತದೆ. ವರ್ಷಕ್ಕೆ ದೇಶದಲ್ಲಿ 1.28 ಲಕ್ಷ ಯುನಿಟ್ ಹಾಗೂ ರಾಜ್ಯದಲ್ಲಿ 6.80 ಲಕ್ಷ ಯುನಿಟ್ ರಕ್ತ ಬೇಕಿದೆ. ಪ್ರತಿಯೊಬ್ಬರೂ ವರ್ಷದಲ್ಲಿ ಒಂದು ಬಾರಿ ರಕ್ತದಾನ ಮಾಡಿದರೆ ರಕ್ತದ ಕೊರತೆಯೇ ಇರುವುದಿಲ್ಲ. ಭಾರತ ಯುವಜನರ ದೇಶವಾಗಿದ್ದು, ಈ ರೀತಿಯ ಪರೋಪಕಾರದ ಕೆಲಸದಲ್ಲಿ ತೊಡಗಬೇಕು. ವರ್ಷಕ್ಕೆ ಒಬ್ಬ ಪುರುಷ 3 ಬಾರಿ ಹಾಗೂ ಮಹಿಳೆ 4 ಬಾರಿ ರಕ್ತದಾನ ಮಾಡಬಹುದು. ಆದರೆ ಒಬ್ಬರು ವರ್ಷಕ್ಕೆ ಒಮ್ಮೆ ರಕ್ತದಾನ ಮಾಡಿದರೂ ಕೊರತೆ ನೀಗಿಸಬಹುದು ಎಂದರು.

ಇದೇ ವೇಳೆ ಕ್ಷಯ ಮುಕ್ತ ಭಾರತ ಅಭಿಯಾನವೂ ನಡೆಯುತ್ತಿದ್ದು, 2025 ಕ್ಕೆ ರಾಜ್ಯವನ್ನು ಕ್ಷಯ ಮುಕ್ತ ಮಾಡುವ ಗುರಿ ಇದೆ. ರಾಜ್ಯದಲ್ಲಿ 36 ಸಾವಿರ ಜನರು ಕ್ಷಯದಿಂದ ಬಳಲುತ್ತಿದ್ದು, 30 ಸಾವಿರ ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರ ನೆರವಿಗಾಗಿ ಕಾರ್ಯಕ್ರಮವೊಂದನ್ನು ಜಾರಿ ಮಾಡಿದ್ದು, ಇದರಡಿ 6 ತಿಂಗಳಿಗಾಗಿ 6 ಸಾವಿರ ರೂ. ನೀಡಿ, ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಬಹುದು ಎಂದು ತಿಳಿಸಿದರು.
ರಾಜ್ಯದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ಮಿಸಿದ್ದು, ಇವುಗಳಲ್ಲಿ ಸುಮಾರು 5 ಸಾವಿರ ಸಮುದಾಯ ಆರೋಗ್ಯ ಅಧಿಕಾರಿಗಳಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲೇ ಈ ಕೇಂದ್ರಗಳಿದ್ದು, ಜನರು ಅಲ್ಲಿಗೆ ಹೋಗಿ ಆರೋಗ್ಯ ತಪಾಸಣೆಯ ಲಾಭ ಪಡೆಯಬೇಕು. ಕೋವಿಡ್ ಮೂರನೇ ಡೋಸ್ ಕೂಡ ಅಭಿಯಾನದಲ್ಲಿ ನೀಡಲಾಗುವುದು ಎಂದರು.
5 ಕೋಟಿ ಕಾರ್ಡ್ ವಿತರಣೆಯ ಗುರಿ
ಈ 15 ದಿನಗಳಲ್ಲಿ 1 ಕೋಟಿ ಆಯುಷ್ಮಾನ್ ಕಾರ್ಡ್ ವಿತರಿಸುವುದು ಹಾಗೂ 100 ದಿನಗಳಲ್ಲಿ 5 ಕೋಟಿ ಕಾರ್ಡ್ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
40 ಸಾವಿರ ಆಶಾ ಕಾರ್ಯಕರ್ತೆಯರು ಭಾಗಿ
ಈ ಅಭಿಯಾನದಲ್ಲಿ 10 ಸಾವಿರ ಆರೋಗ್ಯ ಸಿಬ್ಬಂದಿ ಹಾಗೂ 40 ಸಾವಿರ ಆಶಾ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.