ಬೈಕ್ ಗಳಿಗೆ ಡಿಕ್ಕಿ ಹೊಡೆದ ಕಾರು | ನಾಲ್ವರ ಸಾವು
ಮಧ್ಯಪ್ರದೇಶ : ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಮೇಲೆ ಚಲಿಸುತ್ತಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಬಾಂದ್ರಿ ಪೊಲೀಸ್ ಠಾಣೆಯ ಪಾಲಿ ಗ್ರಾಮದ ಬಳಿ ನಡೆದಿದೆ.
ಭರತ್ ಅಹಿರ್ವಾರ್, ಮಲ್ಖಾನ್ ರಜಾಕ್, ಅವರ ಪತ್ನಿ ರಾಜಕುಮಾರಿ ಮತ್ತು 2 ವರ್ಷದ ಮಗಳು ರಿತಿಕಾ ಮೃತ ದುರ್ದೈವಿಗಳು. ವೇಗವಾಗಿ ಬಂದ ಕಾರು ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಹೆಣ್ಣು ಮಗು, ಆಕೆಯ ಪೋಷಕರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರು ಚಾಲಕ ಸೇರಿ 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಾಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಬಗ್ಗೆ ಖುರೈ ಎಸ್ಡಿಒಪಿ ಸುಮಿತ್ ಕೆರ್ಕೆಟ್ಟಾ ಮಾತನಾಡಿ, ಕಾರು (ಯುಪಿ 16 ಸಿಡಬ್ಲ್ಯೂ 3235) ಉತ್ತರ ಪ್ರದೇಶದಿಂದ ಬರುತ್ತಿತ್ತು. ಪಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಕಾರು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ನಲ್ಲಿದ್ದವರು ದೂರಕ್ಕೆ ಹಾರಿ ಬಿದ್ದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಅಪಘಾತದಲ್ಲಿ ನೋಯ್ಡಾ ನಿವಾಸಿ ಕಾರು ಚಾಲಕ ಮನಮೋಹನ್ ಚೌಹಾಣ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.