BJP ಗೆಲುವಿಗೆ ಸಂಸತ್ತಿನಲ್ಲಿ ಸಂಭ್ರಮ : ಮೋದಿ – ಮೋದಿ ಘೋಷಣೆ..
ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತದ ಮೊದಲ ದಿನ ಲೋಕಸಭೆಯಲ್ಲಿ ಮೋದಿ-ಮೋದಿ ಘೋಷಣೆಗಳು ಮೊಳಗಿದವು. ಲೋಕಸಭೆಯ ಕಲಾಪ ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಯಿತು. ಪ್ರಧಾನಿ ಮೋದಿ ಸದನಕ್ಕೆ ಎಂಟ್ರಿ ಕೊಟ್ಟ ತಕ್ಷಣ ಬಿಜೆಪಿ ಸಂಸದರು ಮೋದಿ-ಮೋದಿ ಘೋಷಣೆಗಳನ್ನು ಕೂಗಿದರು. ಸುಮಾರು ಮೂರ್ನಾಲ್ಕು ನಿಮಿಷಗಳ ಕಾಲ ಬಿಜೆಪಿ ಸಂಸದರು ವಿಜಯೋತ್ಸವ ಆಚರಿಸಿ ಟೇಬಲ್ ಆಡುತ್ತಲೇ ಇದ್ದರು.
ಮೋದಿ ಲೋಕಸಭೆಗೆ ಆಗಮಿಸುವ ವೇಳೆ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಸಂಪುಟ ಸಚಿವರು ಸದನದಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮೊದಲು, ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸಂಸತ್ತಿನ ಆವರಣದಲ್ಲಿ ಬಿಜೆಪಿ ಸಂಸದರು ಅಭಿನಂದಿಸಿದರು.
ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆದ್ದಿದೆ
ಮಾರ್ಚ್ 10 ರಂದು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಈ ರಾಜ್ಯಗಳು – ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ. ಈ ಪೈಕಿ ಪಂಜಾಬ್ ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಈ ಗೆಲುವಿನ ನಂತರ ದೆಹಲಿ ಬಿಜೆಪಿ ಕಚೇರಿಯಲ್ಲಿ ಗುರುವಾರ ಸಂಜೆ ಸಂಭ್ರಮಾಚರಣೆ ಜೋರಾಗಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜನರು ಇಡೀ ಸಮಯ ಮೋದಿ-ಮೋದಿ ಘೋಷಣೆಗಳನ್ನು ಕೂಗುತ್ತಿದ್ದರು.