ದಿಕ್ಕಿಲ್ಲದ ʼಅಭಯ ಹಸ್ತʼಕ್ಕೆ ದಳದ ನಾಯಕರೇ ಗತಿ : ಹೆಚ್ ಡಿ ಕುಮಾರಸ್ವಾಮಿ H D Kumaraswamy saaksha tv
ಬೆಂಗಳೂರು : ದಿಕ್ಕಿಲ್ಲದ ʼಅಭಯ ಹಸ್ತʼಕ್ಕೆ ದಳದ ನಾಯಕರೇ ಗತಿ. ರಾಷ್ಟ್ರೀಯ ಪಕ್ಷಕ್ಕೆ ಇದಕ್ಕಿಂತ ಕರ್ಮ ಇನ್ನೇನಿದೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬಿಡದಿ ಪುರಸಭೆ ಚುನಾವಣೆ ಫಲಿತಾಂಶ ನನ್ನ ಶಕ್ತಿ ಹೆಚ್ಚಿಸಿದೆ.
ಕುಮಾರಸ್ವಾಮಿಯನ್ನು ಬಿಡದಿ ಖಾಲಿ ಮಾಡಿಸುತ್ತೇವೆ ಎನ್ನುತ್ತಿದ್ದವರಿಗೆ ಜನರೇ ಉತ್ತರ ನೀಡಿದ್ದಾರೆ. ಬಿಡದಿ ನನಗೆ ರಾಜಕೀಯ ಜನ್ಮಕೊಟ್ಟ ಪುಣ್ಯಭೂಮಿಯಷ್ಟೇ ಅಲ್ಲ, ನನ್ನ ಪಾಲಿನ ದೇವಭೂಮಿ.
ಮುಂದಿನ 2023ರ ಚುನಾವಣೆಗೆ ಈ ಫಲಿತಾಂಶ ನನಗೆ ಮಾನಸಿಕವಾಗಿ ಶಕ್ತಿ ತುಂಬಿದೆ. ಜನರ ನಿರೀಕ್ಷೆ ಹುಸಿ ಆಗದಂತೆ ಸೇವೆ ಮಾಡುವುದು ನನ್ನ ಮತ್ತು ನಮ್ಮ ಪಕ್ಷದ ಹೊಣೆ. ಅವರ ನಿರೀಕ್ಷೆ ಎಂದೂ ಹುಸಿಯಾಗದು.
ಬಿಡದಿಯನ್ನು ಹಿಡಿಯಲು ಕೆಲವರು ದೊಡ್ಡ ಪ್ರಮಾಣದಲ್ಲಿ ಹೊರಟಿದ್ದರು. ಕುಮಾರಸ್ವಾಮಿ ಕೇತಗಾನಹಳ್ಳಿಯ ಹಳ್ಳದಲ್ಲಿದ್ದಾನೆ, ಆತನನ್ನು ಅಲ್ಲಿಗೇ ನೂಕುತ್ತೇವೆ ಎಂದಿದ್ದರು. ಹಾಗೆ ಅಂದವರನ್ನೆ ಜನ ಹಳ್ಳಕ್ಕೆ ತಳ್ಳಿದ್ದಾರೆ. ಹಣ ಹಾಗೂ ದರ್ಪ ಸೋತಿವೆ.
ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುವವರು, ಅದೇ ಹಡಗಿನ ಹಂಗಿನಲ್ಲೇ ಅಧಿಕಾರ ಅನುಭವಿಸಿದ್ದರು. ಅದೇ ಪಕ್ಷದ ನಾಯಕರು ʼಆಪರೇಷನ್ ಹಸ್ತʼ ಮಾಡಿ ನಮ್ಮ ಮುಖಂಡರನ್ನೇ ಅಭ್ಯರ್ಥಿಗಳನ್ನಾಗಿ ಮಾಡುತ್ತಿದ್ದಾರೆ. ದಿಕ್ಕಿಲ್ಲದ ʼಅಭಯ ಹಸ್ತʼಕ್ಕೆ ದಳದ ನಾಯಕರೇ ಗತಿ. ರಾಷ್ಟ್ರೀಯ ಪಕ್ಷಕ್ಕೆ ಇದಕ್ಕಿಂತ ಕರ್ಮ ಇನ್ನೇನಿದೆ ಎಂದು ಟೀಕೆ ಮಾಡಿದ್ದಾರೆ.
ಉಪ ಚುನಾವಣೆಗಳೇ ಬೇರೆ, ಸಾರ್ವತ್ರಿಕ ಚುನಾವಣೆಗಳೇ ಬೇರೆ. 2023ರಲ್ಲಿ ಜೆಡಿಎಸ್ ಏನು ಎಂದು ಜನರೇ ಉತ್ತರ ಕೊಡುತ್ತಾರೆ. ಹೆಚ್ಚೆನೂ ಸಮಯವಿಲ್ಲ. ಇನ್ನೊಬ್ಬರನ್ನು ಮುಳುಗಿಸಿ ತೇಲುವ ಹಪಾಹಪಿತನಕ್ಕೆ ಕರ್ನಾಟಕ ಕಠೋರ ಶಾಸ್ತಿ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.