ಮಾಜಿ ಸಂಸದ ಮತ್ತು ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೈಸೂರಿಗೆ 5 ರೂಪಾಯಿ ಮೌಲ್ಯದ ಕೆಲಸವನ್ನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಾಪ್ ಸಿಂಹ ಅವರ ಈ ಹೇಳಿಕೆ ಮೈಸೂರಿನ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. “ಲಸಿದ್ದರಾಮಯ್ಯ ಅವರ ದೃಷ್ಟಿಕೋನದಲ್ಲೇ ಅಭಿವೃದ್ಧಿ ಎನ್ನುವ ಸಂಗತಿಗೆ ಯಾವುದೇ ಮೌಲ್ಯವಿಲ್ಲ. ಅವರ ರಾಜಕಾರಣ ಮಾತ್ರ ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳುವುದೇ ಆಗಿದ್ದು, ಜನರ ಆಸೆ-ಬಯಕೆಗಳಿಗೆ ಅವರು ಕಿಂಚಿತ್ತೂ ಗಮನ ಕೊಡುವಂಥವರಲ್ಲ, ಎಂದು ಪ್ರತಾಪ್ ಸಿಂಹ ಆರೋಪಿಸಿದರು.
ಜನರ ಗಮನ ಬೇರೆಡೆ ತಿರುಗಿಸಲು ಸಿದ್ದರಾಮಯ್ಯ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ. ಬಡವರ ಹಿತಕ್ಕಾಗಿ ಕೆಲಸ ಮಾಡುವ ಮಾತುಗಳು ಕೇವಲ ನಾಟಕ ಮಾತ್ರ. ಅವರ ಆಡಳಿತ ಅವ್ಯವಸ್ಥೆ, ಪ್ರಾಮಾಣಿಕತೆಯ ಕೊರತೆ ಮತ್ತು ಸ್ವಾರ್ಥಪೂರ್ಣ ರಾಜಕೀಯ ತಂತ್ರಗಳಿಂದ ಕೂಡಿದೆ ಎಂದು ಹೇಳಿದರು.
ಮೈಸೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರನ್ನೊಳಗೊಂಡ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಪ್ರತಾಪ್, ಪ್ರತಿಯೊಂದು ಯೋಜನೆಯೂ ಕಾಗದದಲ್ಲಿಯೇ ಸೀಮಿತವಾಗಿದೆ. ರೈಲ್ವೆ ನಿಲ್ದಾಣ, ರಸ್ತೆ ವಿಸ್ತರಣೆ, ಬಿಸಿಯೂಟ ಯೋಜನೆ, ಉದ್ಯೋಗ ಸೃಷ್ಟಿ — ಯಾವ ಕ್ಷೇತ್ರದಲ್ಲೂ ಉಲ್ಲೇಖಿಸಬಹುದಾದ ಪ್ರಗತಿ ಇಲ್ಲ. ಕೇವಲ ಘೋಷಣೆಗಳಿಂದ ಜನರನ್ನು ಮರುಳು ಮಾಡುತ್ತಿದ್ದಾರೆ, ಎಂದು ಕಿಡಿಕಾರಿದರು.
ಇದರೊಂದಿಗೆ, ಮುಂದಿನ ಚುನಾವಣೆಗೂ ಮುನ್ನ ಜನರಿಗೆ ಸತ್ಯವನ್ನು ತಿಳಿಯುವಂತೆ ಕರೆ ನೀಡಿದ ಪ್ರತಾಪ್ ಸಿಂಹ, ಈ ಬಾರಿ ಜನರು ವಾಸ್ತವಿಕ ಸೇವೆ ಮಾಡಿದವರನ್ನೇ ಗುರುತಿಸಿ ಮತದಾನ ಮಾಡಬೇಕು. ಕೇವಲ ಘೋಷಣೆಗಳ ಆಧಾರದ ಮೇಲೆ ಅಧಿಕಾರದಲ್ಲಿ ಉಳಿಯುವವರ ವಿರುದ್ಧ ಜನರು ಎಚ್ಚರವಾಗಬೇಕು ಎಂದು ಹೇಳಿದರು.