ರಾಜ್ಯ ಸರ್ಕಾರದ ಆಡಳಿತ ಕ್ರಮ ಮತ್ತು ಅಭಿವೃದ್ಧಿ ಯೋಜನೆಗಳ ಪ್ರಗತಿಗೆ ಸಂಬಂಧಿಸಿದಂತೆ ಎರಡನೇ ದಿನ ನಡೆಯುತ್ತಿದ್ದ ಡಿಸಿ ಮತ್ತು ಸಿಇಒಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಬೇಕಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹಲವಾರು ಸಚಿವರು ಸರಿಯಾದ ಸಮಯಕ್ಕೆ ಆಗಮಿಸದೇ ತಡವಾಗಿ ಸಭೆಗೆ ಬಂದ ಕಾರಣ ಸಿಎಂ ಗರಂ ಆಗಿದ್ದಾರೆ.
ಸಭೆ ಪ್ರಾರಂಭವಾಗುವ ಮುನ್ನವೇ ಕೆಲವು ಸಚಿವರನ್ನು ಅಧಿಕಾರಿಗಳು ಬರಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ, ಕೆಲವು ಪ್ರಮುಖ ಸಚಿವರು ಇನ್ನೂ ಆಗಮಿಸದಿರುವುದು ಸಿಎಂ ಗಮನಕ್ಕೆ ಬಂದಿದೆ. ಇದರಿಂದ ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಯಾರ್ಯಾರು ಸಭೆಗೆ ಬಂದಿಲ್ಲವೋ ಅವರ ಹೆಸರನ್ನೆಲ್ಲಾ ಗುರುತಿಸಿ ನಾ ನೋಡ್ತೀನಿ ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಮಟ್ಟದ ಯೋಜನೆಗಳ ಅನುಷ್ಠಾನ, ಜಿಲ್ಲಾಧ್ಯಕ್ಷರ ಕೆಲಸದ ಅವಲೋಕನ, ಹಾಗೂ ಭವಿಷ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಈ ಸಭೆ ಆಯೋಜಿಸಲಾಗಿತ್ತು. ಆದರೆ, ಈ ರೀತಿಯಾಗಿ ಸಭೆಗೆ ತಡವಾಗಿ ಬರೋದು ಅಥವಾ ಭಾಗವಹಿಸದಿರುವುದು ಸರಕಾರದ ಗಂಭೀರತೆಯ ಕೊರತೆಯಂತೆ ಕಂಡುಬರುತ್ತಿದೆ ಎಂಬ ಅಭಿಪ್ರಾಯಗಳನ್ನು ಸಿಎಂ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.








