ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ನಡೆಯುತ್ತಿರುವ ಆಂತರಿಕ ಜಟಾಪಟಿಯು ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗುರುವಾರ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ. ಪಾಟೀಲ್ ಆಕಾಂಕ್ಷಿಗಳಾಗಿದ್ದು, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಅಪಾಯದಲ್ಲಿದೆ ಎಂದು ಅವರು ಪ್ರತಿಪಾದಿಸಿದರು.
“ಸಿದ್ದರಾಮಯ್ಯ ಅವರು ಇನ್ನು ಆರು ತಿಂಗಳಷ್ಟೇ ಮುಖ್ಯಮಂತ್ರಿ ಆಗಿರುತ್ತಾರೆ. ಈ ಬಗ್ಗೆ ಒಪ್ಪಂದ ಆಗಿದೆ. ಒಪ್ಪಂದ ಆಗಿರುವುದು ನೋಟರಿ ಬಳಿಯಲ್ಲ, ಉಪನೋಂದಣಾಧಿಕಾರಿ ಕಚೇರಿ (ಕಾಂಗ್ರೆಸ್ ಹೈಕಮಾಂಡ್) ಯಲ್ಲಿ” ಎಂದು ಅಶೋಕ್ ವ್ಯಂಗ್ಯವಾಡಿದರು. ಇದು, ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಒಳ ಒಪ್ಪಂದ ನಡೆದಿದೆ ಎಂಬ ಬಿಜೆಪಿಯ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ವ್ಯಂಗ್ಯವಾಡಿದ ಅಶೋಕ್, “ಅಂಥವರು ನಮ್ಮ ಕೇಂದ್ರ ಸರ್ಕಾರಕ್ಕೆ ಅಂಕ ಕೊಡುವುದನ್ನು ನಾವಾಗಲಿ– ಜನರಾಗಲಿ ನಿರೀಕ್ಷಿಸುವುದಿಲ್ಲ. ಏಕೆಂದರೆ, ಅವರು ಇರುವುದೇ ಗ್ಯಾರಂಟಿ ಇಲ್ಲ. ಶೀಘ್ರದಲ್ಲೇ ನಿರ್ಗಮಿತ ಸಿಎಂ ಆಗಲಿದ್ದಾರೆ” ಎಂದು ಲೇವಡಿ ಮಾಡಿದರು.
ಅಶೋಕ್ ಅವರ ಈ ಹೇಳಿಕೆಯು, ಕಾಂಗ್ರೆಸ್ ಸರ್ಕಾರದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡುವ ಬಿಜೆಪಿಯ ತಂತ್ರದ ಭಾಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಕಾಂಗ್ರೆಸ್ ನಾಯಕರು ಈ ಆರೋಪಗಳನ್ನು ನಿರಂತರವಾಗಿ ತಳ್ಳಿಹಾಕುತ್ತಾ, ತಮ್ಮ ಸರ್ಕಾರ ಸ್ಥಿರವಾಗಿದೆ ಎಂದು ಹೇಳುತ್ತಿದ್ದಾರೆ.