ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ RCB ವಿಜಯೋತ್ಸವದ ನಂತರ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ, ಇದೀಗ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅವರನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಅಮಾನತುಗೊಳಿಸಿದೆ.
ಈ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಗೋವಿಂದರಾಜು ಅವರು ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದು, ವಿಜಯೋತ್ಸವದ ಕಾರ್ಯಕ್ರಮದ ವ್ಯವಸ್ಥೆಯ ಹಿಂದೆ ಅವರ ಪಾತ್ರ ಪ್ರಮುಖವಿದೆ ಎಂಬ ಆಂತರಿಕ ಮಾಹಿತಿಗಳು ಸಚಿವ ಸಂಪುಟದ ಮಟ್ಟದಲ್ಲಿ ಅಸಮಾಧಾನ ಹುಟ್ಟಿಸಿದೆ.
ಅಧಿಕಾರಿಗಳ ಮತ್ತು ನಿಗಮಿತ ಸಂಸ್ಥೆಗಳ ವಿರುದ್ಧ ಕ್ರಮ ಜರುಗುತ್ತಿರುವ ನಡುವೆ, ಗೋವಿಂದರಾಜು ಅವರ ವಿರುದ್ಧವೂ ವಿಧಾನಸೌಧದ ಮುಂದೆ ತರಾತುರಿಯ ಸಂಭ್ರಮಾಚರಣೆ ನಡೆಸಲು ಒತ್ತಾಯಿಸಿದ್ದು ಅವರೇ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. RCB ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರನ್ನು ಪೊಲೀಸರು ಬಂಧಿಸಿದ ತಕ್ಷಣ, ಅವರನ್ನು ಬಿಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅವರು ನೇರವಾಗಿ ಪೊಲೀಸರಿಗೆ ಒತ್ತಡ ಹಾಕಿದ್ದರೆಂಬ ಸುದ್ದಿ ಕೂಡ ಹರಿದಾಡುತ್ತಿದೆ. ಇದರಿಂದಾಗಿ ಸರ್ಕಾರದ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾಗಿದ್ದು, ವಿರೋಧ ಪಕ್ಷಗಳ ಟೀಕೆಗೆ ದಾರಿ ಮಾಡಿಕೊಟ್ಟಿದೆ.
ವಿರೋಧಪಕ್ಷಗಳು ಈಗ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆ ಒತ್ತಾಯಿಸುತ್ತಿರುವಾಗ, ಈ ಹಿನ್ನಲೆಯಲ್ಲಿ ಗೋವಿಂದರಾಜು ವಿರುದ್ಧದ ಕ್ರಮಕ್ಕೆ ವ್ಯಾಪಕ ಮಹತ್ವ ಸಿಕ್ಕಿದೆ.