ಕಾಮಿಡಿ ಕಿಲಾಡಿಯಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟ ಶಿವರಾಜ್ ಕೆ.ಆರ್. ಪೇಟೆ ಅವರ ತಂದೆ ನಿಧನರಾಗಿದ್ದಾರೆ.
ರಾಮೇಗೌಡ (80) (Ramegowda) ಕೆ.ಆರ್ ಪೇಟೆಯ ಶೀನಕೆರೆ ಹೋಬಳಿಯ ರಾಜಘಟ್ಟ ಎಂಬ ಗ್ರಾಮದಲ್ಲಿನ ಅವರ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ರಾಮೇಗೌಡ ಅವರು, ಡ್ರಾಮಾ ಮಾಸ್ಟರ್ ಎಂದು ಅವರ ಗ್ರಾಮದಲ್ಲಿ ಖ್ಯಾತಿ ಗಳಿಸಿದ್ದರು. ಅವರಂತೆಯೇ ಅವರ ಮಗ ಕೂಡ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಈಗ ಚಂದನವನದ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದಾರೆ.
ಮೃತರು ಪತ್ನಿ ಸಾವಿತ್ರಮ್ಮ, ಚಿತ್ರನಟ ಕೆ.ಆರ್.ಪೇಟೆ ಶಿವರಾಜ್ ಸೇರಿದಂತೆ ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ನಾಳೆ ಮಧ್ಯಾಹ್ನ ಅವರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.